ಮಡಿಕೇರಿ, ಅ. ೧೧ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ನಗರದ ನಾಲ್ಕು ಶಕ್ತಿ ದೇವತೆಗಳ ಸಾಂಪ್ರದಾಯಿಕ ಕರಗ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.
ನಗರದ ಮಹದೇವಪೇಟೆಯಲ್ಲಿರುವ ಪಂಪಿನಕೆರೆ ಬಳಿಯ ಕರಗ ಪೂಜಾ ಕಟ್ಟೆಯಲ್ಲಿ ಶಕ್ತಿ ದೇವತೆಗಳಾದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿ ಕರಗ ದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು. ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಜಿಜೇಶ್, ಕೋಟೆ ಮಾರಿಯಮ್ಮ ಕರಗವನ್ನು ಪ್ರಜ್ವಲ್, ಕಂಚಿಕಾಮಾಕ್ಷಿ ಕರಗವನ್ನು ಗಿರೀಶ್ ಹೊತ್ತಿದ್ದರು.
ಪೂಜೆಯ ಬಳಿಕ ಕರಗ ದೇವತೆಗಳು ಪಂಪಿನ ಕೆರೆಯಿಂದ ಹೊರಟ ಸಂದರ್ಭ ಭಕ್ತರು ಪುಷ್ಪಾರ್ಚನೆ, ಮಂಗಳಾರತಿ, ಹಣ್ಣುಕಾಯಿ, ಈಡುಗಾಯಿ ಸೇವೆಯೊಂದಿಗೆ ಪೂಜೆ ಸಲ್ಲಿದರು. ಬನ್ನಿಮಂಟಪದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ದೇವಾಲಯದಲ್ಲಿ ಕರಗಳಿಗೆ ಬಾಗಿನ ಅರ್ಪಣೆಯೊಂದಿಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ನಂತರ ಕರಗಗಳು ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ಸನ್ನಿಧಿ, ಪೇಟೆ ಶ್ರೀ ರಾಮ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ಪೂಜಾ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ. ನರೇಂದ್ರ ಸ್ವಾಮಿ, ಶಾಸಕ ಡಾ. ಮಂತರ್ ಗೌಡ, ಮಾಜಿ ವಿಧಾನಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನಗರಸಭೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್‌ಕುಮಾರ್, ನಗರ ಸಭೆ ಉಪಾಧ್ಯಕ್ಷ, ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ದಶಮಂಟಪ ಸಮಿತಿ ಅಧ್ಯಕ್ಷ ಪಾಂಡಿರ ಪೂಣಚ್ಚ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಡಿಸಿಎಫ್ ಅಭಿಶೇಕ್, ಡಿವೈಎಸ್‌ಪಿ ಸೂರಜ್, ವೃತ್ತನಿರೀಕ್ಷಕ ಚಂದ್ರಶೇಖರ್, ಠಾಣಾಧಿಕಾರಿ ಶ್ರೀಧರ್, ನಗರಸಭಾ ಆಯುಕ್ತ ರಮೇಶ್, ಇತರ ಅಧಿಕಾರಿ ವರ್ಗದವರು, ದಸರಾ ಸಮಿತಿ, ದಶಮಂಟಪ, ಕರಗ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ನರೇಂದ್ರ ಸ್ವಾಮಿ ಶಕ್ತಿ ದೇವತೆಗಳ ಪೂಜೆಯೊಂದಿಗೆ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ದೇವತೆಗಳ ಕೃಪೆಯಿಂದ ನಾಡು ಸುಭಿಕ್ಷೆವಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು. ವರ್ಷಂಪ್ರತಿಯAತೆ ಈ ಬಾರಿಯೂ ಕರಗಗಳು ಸಾಗುವ ಮಾರ್ಗದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದರಿಂದ ಮಹಿಳೆಯರು ತಮ್ಮ ಮನೆಯೆದುರಿನ ರಸ್ತೆಯಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿದ್ದರು. ಶ್ರೀ ಕೋಟೆ ಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವದ ಅಂಗವಾಗಿ ಮಹದೇವಪೇಟೆ ಕ್ರೆಸೆಂಟ್ ಶಾಲೆ ಬಳಿ ಕರಗ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.