ವೀರಾಜಪೇಟೆ, ಅ. ೧೧: ಜೀವನದಲ್ಲಿ ಶಿಕ್ಷಣ ಪಡೆಯುವುದರೊಂದಿಗೆ ಸಂಸ್ಕಾರ ಪಡೆದುಕೊಳ್ಳುವುದು ಬಹು ಮುಖ್ಯ. ಜಾತಿ, ಮತ, ಬೇದ, ಧರ್ಮ, ಪಂಕ್ತಿ ಮರೆತು ಸೇವೆ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ ಹಾಗೂ ಪ್ರಶಂಸನೀಯ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ವಿರಾಜಪೇಟೆ ತಾಲೂಕಿನ ರಾಮನಗರ ಹೆಗ್ಗಳದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಹಾಗೂ ಕೊಡಗು ಜಿಲ್ಲೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳ ಬೆಂಗಳೂರು ಇವರ ನೇತೃತ್ವ, ಇದರೊಂದಿಗೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವೀರಾಜಪೇಟೆ ಮತ್ತು ಅಮತ್ತಿ ವಲಯ, ಗ್ರಾಮ ಪಂಚಾಯಿತಿ ಬೇಟೋಳಿ, ಸಮುದಾಯ ಆರೋಗ್ಯ ಕೇಂದ್ರ ವೀರಾಜಪೇಟೆ, ನಗರ ಆರಕ್ಷಕ ಠಾಣೆ ವೀರಾಜಪೇಟೆ, ನವಜೀವನ ಸಮಿತಿ ವಿರಾಜಪೇಟೆ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ವೀರಾಜಪೇಟೆ ತಾಲೂಕು ಹಾಗೂ ಸ್ಥಳೀಯ ಸಂಘ-ಸAಸ್ಥೆಗಳು ಮತ್ತು ಊರಿನ ದಾನಿಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಮದ್ಯವ್ಯರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯನಿಗೆ ಮನಸ್ಸೇ ಶ್ರೇಷ್ಠ. ಮದ್ಯವರ್ಜನ ಶಿಬಿರಗಳಿಂದ ನಾವು ಪರಿವರ್ತನೆ ಆದರೆ ಸಾಲದು ನಮ್ಮ ಪರಿಸರದ ಸುತ್ತಮುತ್ತಲಿರುವ ಜನರನ್ನು ಪರಿವರ್ತನೆ ಆಗುವ ರೀತಿಯಲ್ಲಿ ಮಾಡಬೇಕು. ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್ ಮಾತನಾಡಿ ಮದ್ಯಪಾನದಿಂದಾಗಿ ತಾಯಂದಿರು ಹಾಗೂ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನರಕಯಾತನೆ, ಮದ್ಯ ವ್ಯಸನಿಗಳಿಗೆ ಗೌರವ ಶೂನ್ಯ, ಕುಟುಂಬ ನಿರ್ವಹಣೆ ಕಷ್ಟಸಾಧ್ಯ, ಸಮಾಜದಲ್ಲಿ ನಡೆಸುತ್ತಿರುವ ಕಳಂಕಿತ ಜೀವನವನ್ನು ಅರಿತು ಮದ್ಯದಿಂದ ಆಗುವ ದುಷ್ಪರಿಣಾಮಗಳನ್ನು ಇಡಿ ಜಗತ್ತಿಗೆ ಸಾರಿ ಹೇಳುವ ಉದ್ದೇಶದಿಂದ ಮದ್ಯವರ್ಜನ ಶಿಬಿರಗಳ ಅಭಿಯಾನವನ್ನು ಆರಂಭಿಸಿ ಲಕ್ಷಾಂತರ ಮದ್ಯ ವ್ಯಸನಿಗಳಿಗೆ ನವಜೀವನವನ್ನು ನೀಡಿದ್ದಾರೆ.
ವೀರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಯಶ ಸಾಧಿಸಿದ್ದಾರೆ. ೭೪ ಶಿಬಿರಾರ್ಥಿಗಳು ಮದ್ಯವನ್ನು ತ್ಯಜಿಸಿ ನವಜೀವನವನ್ನು ಪ್ರಾರಂಭಿಸುತ್ತಿರುವುದು ಹರ್ಷದಾಯಕ ಎಂದು ಹೇಳಿದರು.
ಜಿಲ್ಲಾ ನಿರ್ದೇಶಕ ವಿಠಲ್ ಸಾಲಿಯಾನ್ ಮಾತನಾಡಿ ೨೧೩೧ ನೇ ಶಿಬಿರವು ಯಶಸ್ವಿಯಾಗಿ ತಲುಪಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು, ಕುಡಿತದ ಬಲೆಯಿಂದ ಹೊರಬರಲು ಬಯಸುವವರಿಗೆ ಇಲ್ಲಿ ಸಂಪೂರ್ಣ ವೈಜ್ಞಾನಿಕ ಆಪ್ತಸಮಾಲೋಚನೆ ಹಾಗೂ ಪುನರ್ಜನ್ಮ ನೀಡುವ ವಾತಾವರಣ ಕಲ್ಪಿಸಲಾಗುತ್ತದೆ ಎಂದರು.
ಅಖಿಲ ಕರ್ನಾಟಕಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಮಾತನಾಡಿ, ಕುಡಿತದಿಂದ ಕೇವಲ ವ್ಯಕ್ತಿಯ ಆರೋಗ್ಯವಷ್ಟೇ ಅಲ್ಲದೆ, ಇಡೀ ಕುಟುಂಬವೇ ಆರ್ಥಿಕ ಹಾಗೂ ಮಾನಸಿಕವಾಗಿ ಬೀದಿಪಾಲಾಗಲು ಮದ್ಯವೇ ಮೂಲ ಕಾರಣವಾಗುತ್ತಿದೆ ಎಂದು ಹೇಳಿದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವಿ. ಜೇಮ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಟು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಕುಂದುಕೊರತೆ ಬಾರದ ರೀತಿಯಲ್ಲಿ ಸಹಕಾರ ನೀಡಿದ ಶಿಭಿರಾರ್ಥಿಗಳು ಸೇರಿದಂತೆ ಎಲ್ಲರನ್ನು ಸ್ಮರಿಸಿದರು.
ವೇದಿಕೆಯಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೋಳೆರ ದಯಾ ಚಂಗಪ್ಪ, ಪಳೆಯಂಡ ಪಾರ್ಥ ಚಿಣ್ಣಪ್ಪ, ವಿ.ಎಂ ಸುಬ್ರಮಣಿ, ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಹರೀಶ್, ಕೃಷಿ ಮೇಲ್ವಿಚಾರಕರಾದ ವಸಂತ್, ಧನೇಶ್, ಜ್ಞಾನವಿಕಾಸ ಕೆಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಪಿ. ಸಂತೋಷ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಲಕ್ಷಿ÷್ಮ ಶಶಿಕಾಂತ್ ಹಾಗೂ ಸುಮನ ಪ್ರವೀಣ್ ಉಪಸ್ಥಿತರಿದ್ದರು.