ಸೋಮವಾರಪೇಟೆ, ಅ. ೧೦: ಸಮೀಪದ ಐಗೂರು ಗ್ರಾಮದ ಚೋರನಹೊಳೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಐಗೂರಿನ ಪೊನ್ನಚನ ತೇಜ ಹಾಗೂ ಶಮಾ ದಂಪತಿ ಪುತ್ರ, ಎರಡೂವರೆ ವರ್ಷದ ಚಹತ್ ಮೃತಪಟ್ಟ ಮಗು. ಇಂದು ಸಂಜೆ ವೇಳೆಗೆ ಅವಳಿ ಸೋದರ ಮತ್ತು ಚಿಕ್ಕಪ್ಪನ ಮಗನೊಂದಿಗೆ ಮನೆಯ ಸನಿಹದಲ್ಲಿಯೇ ಇರುವ ಚೋರನ ಹೊಳೆಗೆ ಆಟವಾಡಲೆಂದು ತೆರಳಿದ್ದು, ಈ ಸಂದರ್ಭ ಆಕಸ್ಮಿಕವಾಗಿ ನೀರಿಗೆ ಬಿದ್ದು ಮಗು ಸಾವನ್ನಪ್ಪಿದೆ.

ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದ ಹಿನ್ನೆಲೆ ಮಕ್ಕಳು ಆಟವಾಡಲು ತೆರಳುತ್ತಿದ್ದರು. ಆದರೆ

ನಿನ್ನೆ ಸಂಜೆ ತಾಕೇರಿ, ಕಿರಗಂದೂರು ಭಾಗದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಐಗೂರು ಚೋರನ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಇದರ ಅರಿವಿಲ್ಲದೆ ಮಕ್ಕಳು ನೀರಿನಲ್ಲಿ ಆಟವಾಡುವ ಸಂದರ್ಭ ಆಕಸ್ಮಿಕವಾಗಿ ಚಹತ್ ಕಾಲು ಜಾರಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಇಹಲೋಕ ತ್ಯಜಿಸಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಮನೆಯವರು ನೀರಿನೊಳಗಿದ್ದ ಚಹತ್‌ನನ್ನು ಮೇಲೆತ್ತಿ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು, ಮಗು ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ. ಮಗುವಿನ ನಿಧನದಿಂದ ಪೋಷಕರು, ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದ್ದು, ಗ್ರಾಮಸ್ಥರಲ್ಲೂ ಶೋಕ ಮಡುಗಟ್ಟಿದೆ.

ಮೃತ ಚಹತ್ ಪೋಷಕರೊಂದಿಗೆ ಓರ್ವ ಸಹೋದರ, ಈರ್ವರು ಸಹೋದರಿಯರನ್ನು ಅಗಲಿದ್ದಾನೆ. ಅಂತ್ಯಕ್ರಿಯೆ ತಾ.೧೧ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.