ಕೂಡಿಗೆ, ಅ. ೯: ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಮುಂಭಾಗ ಹೂ ವ್ಯಾಪಾರಕ್ಕೆ ಶೆಡ್ ನಿರ್ಮಾಣ ಯೋಜನೆಗೆ ಆಟೋ ಚಾಲಕರ ಮತ್ತು ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಕಾವೇರಿ ಆಟೋ ನಿಲ್ದಾಣದಲ್ಲಿ ಹೂ ವ್ಯಾಪಾರಸ್ಥರಿಂದ ಆಟೋ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕುಶಾಲನಗರದಲ್ಲಿ ಸುಮಾರು ೩೫ ರಿಂದ ೪೦ ವರ್ಷಗಳಿಂದ ಕಾವೇರಿ ಆಟೋ ನಿಲ್ದಾಣದಲ್ಲಿ ಆಟೋಗಳನ್ನು ನಿಲ್ಲಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೆಲವು ವರ್ಷಗಳ ಮೊದಲು ಹೂವಿನ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಕಲ್ಪಿಸುವ ತನಕ (ತಾತ್ಕಾಲಿಕ) ವಾಗಿ ಸಣ್ಣ ಟೇಬಲ್ ಹಾಗೂ ಸ್ಟೂಲ್ ಇಟ್ಟು ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ವ್ಯಾಪಾರಸ್ಥರು ಶೆಡ್ ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಗ್ರಾಹಕರು ಕಾರು, ಬೈಕುಗಳಲ್ಲಿ ವ್ಯಾಪಾರ ಮಾಡಲು ಬಂದ ಸಂದರ್ಭ ಆಟೋಗಳಿಗೆ ಡಿಕ್ಕಿಪಡಿಸಿ ಆಗಾಗ ಗಲಾಟೆಗಳು ನಡೆದಿವೆ. ಆದ್ದರಿಂದ ಈ ಜಾಗದಲ್ಲಿ ಹೂವಿನ ವ್ಯಾಪಾರಸ್ಥರಿಗೆ ಶೆಡ್ ನಿರ್ಮಿಸಲು ಅನುವು ಮಾಡಿಕೊಡಬಾರದು. ಕೊಟ್ಟಿದ್ದೆ ಆದಾ ಪಕ್ಷದಲ್ಲಿ ಸುಮಾರು ೨೦೦೦ ದಿಂದ ೨೫೦೦ ಸಂಖ್ಯೆಯಲ್ಲಿರುವ ಅಟೋಗಳನ್ನು ಸ್ಥಗಿತಗೊಳಿಸಿ ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬAಧ ಶಾಸಕರ ಗಮನ ಸೆಳೆದು ಅವರ ಸಮ್ಮುಖದಲ್ಲಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಕೃಷ್ಣದರ್ಶನ್, ಕಾರ್ಯಾಧ್ಯಕ್ಷ ಕೆ.ಟಿ. ಯೋಗೇಶ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಸಂತುಗೌಡ, ಖಜಾಂಚಿ ಮುನೀರ್, ಮಾಜಿ ಅಧ್ಯಕ್ಷ ಯೋಗೇಶ್ ಮತ್ತು ಪ್ರಮುಖರು, ಸದಸ್ಯರು ಇದ್ದರು.