ಮಡಿಕೇರಿ,ಅ.೮ : ಮಡಿಕೇರಿ ನಗರದಲ್ಲಿ ತಲೆದೋರಿರುವ ಕಸದ ಸಮಸ್ಯೆಗೆ ಪರಿಹಾರ ಕಲ್ಪಿಸುವದು ಹಾಗೂ ಬೇಸಿಗೆಯಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭಾ ಸಭಾಂಗಣದಲ್ಲಿAದು ನಗರಸಭಾಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕರು ಕಸ ವಿಂಗಡಣೆ, ಸಾಗಾಟ ಕುರಿತಾಗಿ ಕೈಗೊಳ್ಳಲಾಗಿರುವ ಪ್ರಕ್ರಿಯೆ ಬಗ್ಗೆ ಪ್ರಸ್ತಾಪಿಸಿದರು. ಕಸದಿಂದ ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬೆಂಗಳೂರಿಗೆ ತೆರಳಿ ಪರಿಶೀಲನೆ ಮಾಡಿ ಎರಡು ತಿಂಗಳಾಗಿದೆ. ಈ ನಿಟ್ಟಿನಲ್ಲಿ ಸ್ಥಳ ಗುರುತಿಸಿ, ಯೋಜನೆ ರೂಪಿಸುವಂತೆ ಸೂಚಿಸಲಾಗಿದ್ದು, ಪ್ರಕ್ರಿಯೆ ಏನಾಗಿದೆ ಎಂದು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಪೌರಾಯುಕ್ತ ರಮೇಶ್ ಅವರು; ಪುತ್ತೂರಿನ ಸಂಸ್ಥೆಯೊAದು ರೂ.೧೦ ಲಕ್ಷದಲ್ಲಿ ಯೋಜನಾ ವಿವರ ತಯಾರಿಸಲು ಕೊಟೇಶನ್ ಹಾಕಿರುವದಾಗಿ ತಿಳಿಸಿದರು. ಈ ಬಗ್ಗೆ ಚರ್ಚೆಯಾಗಿ ಯೋಜನಾ ವಿವರ ತಯಾರಿಸಲು ಅನುಮತಿ ನೀಡಲಾಯಿತಲ್ಲದೆ, ಒಮ್ಮೆ ಪುತ್ತೂರಿಗೆ ತೆರಳಿ ಅಲ್ಲಿನ ಘಟಕವನ್ನು ಪರಿಶೀಲಿಸುವಂತೆ ತೀರ್ಮಾನಿಸಲಾಯಿತು. ಮಡಿಕೇರಿಯಲ್ಲಿ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೆ ಖಾಸಗಿ ಬಸ್ ನಿಲ್ದಾಣದ ಬಳಿಯ ಜಾಗವನ್ನು ನಿಗದಿಪಡಿಸಲಾಯಿತು.

ಹಸಿ ಕಸ ಸಾಗಾಟ

ನಗರದಲ್ಲಿ ಸಂಗ್ರಹವಾಗುವ ಹಸಿ ಕಸಗಳನ್ನು ಮತ್ತೆ ಸ್ಟೋನ್ ಹಿಲ್‌ನಲ್ಲಿ ಸುರಿಯಲಾಗುತ್ತಿದೆ. ಇದು ಸರಿಯಲ್ಲ. ಮೊಣ್ಣಂಗೇರಿಯಲ್ಲಿ ಜಾಗ ಗುರುತಿಸಲಾಗಿದೆಯಾದರೂ ಅಲ್ಲಿ ಕಸವನ್ನು ಹಾಕಿದರೆ ಮತ್ತೆ ನಾವುಗಳೇ ಪರಿಸರ ಹಾಳು ಮಾಡಿದಂತಾಗುತ್ತದೆ. ಈಗಾಗಲೇ ೨೦ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದು, ಮುಂದಕ್ಕೆ ಸಮಸ್ಯೆ ತಡೆದುಕೊಳ್ಳಲು ಯಾರೂ ತಯಾರಿರುವದಿಲ್ಲ. ಹಾಗಾಗಿ ಹಸಿ ಕಸ ಸಾಗಾಟಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ಶಾಸಕರು ಮಾಹಿತಿ ಬಯಸಿದರು.

ಪ್ರತಿಕ್ರಿಯಿಸಿದ ಪೌರಾಯುಕ್ತರು; ಖಾಸಗಿ ಸಂಸ್ಥೆಯೊAದು ನಗರದಿಂದ ಹಸಿ ಕಸವನ್ನು ಕೊಂಡೊಯ್ದು ಬೆಳೆಗಾರರ ತೋಟಗಳಲ್ಲಿ ಸಂಗ್ರಹಿಸಿ ಗೊಬ್ಬರ ತಯಾರಿಸುವ ಬಗ್ಗೆ ನಗರಸಭೆಗೆ ಆಗಮಿಸಿ ಮಾಹಿತಿ ನೀಡಿದ್ದಾರೆ. ಇದಕ್ಕೆ ವರ್ಷಕ್ಕೆ ರೂ.೩೨ ಲಕ್ಷ ನಗರಸಭೆಯಿಂದ ಭರಿಸಬೇಕಿದೆ. ಸಂಸ್ಥೆಯವರ ವಾಹನಕ್ಕೆ ನಗರಸಭೆಯ ಕಸದ ವಾಹನದಲ್ಲಿ ಕಸ ಸಾಗಾಟ ಮಾಡಿಕೊಡಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕರು; ಈ ಬಗ್ಗೆ ಸಾಧಕ-ಬಾದಕಗಳ ಬಗ್ಗೆ ಅವಲೋಕಿಸಬೇಕಿದೆ. ಸಂಗ್ರಹವಾದ ಕಸಗಳನ್ನು ಸಂಸ್ಥೆಯವರು ಸಾಗಾಟ ಮಾಡುವ ಬಗ್ಗೆ, ಅದರ ಖರ್ಚು ವೆಚ್ಚ, ಕನಿಷ್ಟ ೨ ವರ್ಷಗಳವರೆಗೆ ಸಾಗಾಟ ಮಾಡುವ ಬಗ್ಗೆ ಕರಾರು ಮಾಡಿಕೊಳ್ಳುವದು ಮುಂತಾದುವನ್ನು ಮಾಡಿಕೊಳ್ಳಬೇಕಿದೆ. ಮುಂದಕ್ಕೆ ನಗರಸಭೆ ವ್ಯವಸ್ಥಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸಂಸ್ಥೆಯವರನ್ನು ಕರೆಸಿ ಮಾತುಕತೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

ಒಣ ಕಸ ಸಂಗ್ರಹಗಾರ

ಒಣ ಕಸ ಸಂಗ್ರಹ ಹಾಗೂ ವಿಂಗಡಣೆ ಮಾಡುವ ನಿಟ್ಟಿನಲ್ಲಿ ಘಟಕ ನಿರ್ಮಾಣ ಕಾರ್ಯ ವಿಳಂಬ ಮಾಡಿರುವ ಬಗ್ಗೆ ಶಾಸಕರು ಪೌರಾಯುಕ್ತರಲ್ಲಿ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಆಯುಕ್ತರು; ಜಾಗದ ಸಮಸ್ಯೆಯಿಂದ ವಿಳಂಬವಾಗಿದೆ ಎಂದು ಉತ್ತರಿಸಿದಾಗ ಅಸಮಾಧಾನಗೊಂಡ ಶಾಸಕರು; ಈಗಾಗಲೇ ಮೈತ್ರಿ ಸಮುದಾಯ ಭವನದ ಬಳಿ ಇರುವ ಜಾಗ ಗುರುತಿಸಿ, ಪರಿಶೀಲಿಸಲಾಗಿದೆ. ನಗರಸಭೆಯ ಜಾಗವಾಗಿದ್ದು ಕೆಲಸ ಮಾಡಲು ವಿಳಂಬವೇಕೇ ಎಂದು ಕೇಳಿದರು. ದನಿಗೂಡಿಸಿದ ಉಪಾಧ್ಯಕ್ಷ ಮಹೇಶ್ ಜೈನಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಪ್ಪಣ್ಣ ಹಾಗೂ ಸತೀಶ್ ಕುಮಾರ್ ಅವರುಗಳು; ಮೈತ್ರಿ ಬಳಿ ಇರುವ ಜಾಗ ಸೂಕ್ತವಾದುದಾಗಿದೆ. ಅಲ್ಲಿಯೇ ನಿರ್ಮಾಣ ಮಾಡಬಹುದು. ಅಭಿಯಂತರರೊAದಿಗೆ ತೆರಳಿ ಜಾಗ ಪರಿಶೀಲನೆ ಮಾಡಿರುವದಾಗಿಯೂ ಹೇಳಿದರು. ಕಸ ಸಂಗ್ರಹ ಜಾಗ ಸನಿಹದಲ್ಲಿ ಇದ್ದರೆ ಆಗಾಗ್ಗೆ ಪರಿಶೀಲನೆ ಮಾಡಲು ಅನುಕೂಲವಾಗಲಿದೆ. ವಿಳಂಬ ಮಾಡದೆ ನಾಳೆಯಿಂದಲೇ ಜಾಗ ಸಮತಟ್ಟು ಮಾಡುವದರೊಂದಿಗೆ ೪ ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕೆಲಸ ಪ್ರಾರಂಭಿಸುವAತೆ ಪೌರಾಯುಕ್ತರಿಗೆ ಸೂಚಿಸಿದರು. ಕಸ ವಿಂಗಡಣೆ ಹಾಗೂ ಸಾಗಾಟ ಮಾಡುವ ಸಂಬAಧ ಟೆಂಡರ್ ಕರೆದು ಕಾರ್ಯೋನ್ಮುಖರಾಗುವಂತೆ ನಿರ್ದೇಶಿಸಿದರು.

ಹಳೆ ಕಸ ತೆರವು

ಮಡಿಕೇರಿಯಲ್ಲಿ ಕಸ ವಿಂಗಡಣೆ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿದೆ. ೨೦೦೪ರಿಂದ ಸ್ಟೋನ್‌ಹಿಲ್‌ನಲ್ಲಿ ಸಂಗ್ರವಾಗಿರುವ ಹಳೆ ಪಾರಂಪರಿಕ ಕಸವನ್ನು ತೆರವು ಮಾಡಲೇಬೇಕು. ವಿಂಗಡಣೆ ಹಾಗೂ ತೆರವು ಕಾರ್ಯ ಗುತ್ತಿಗೆ ಪಡೆದವರು ಸ್ವಲ್ಪ ಕೆಲಸ ಮಾಡಿ ಸ್ಥಗಿತಗೊಳಿಸಿದ್ದಾರೆ. ಮಾಡಿದ ಕೆಲಸದ ಬಿಲ್ ಪಾವತಿ ಮಾಡಿ ಕೆಲಸ ಪೂರ್ಣಗೊಳಿಸಬೇಕೆಂದು ಶಾಸಕರು ಹೇಳಿದರು. ಪ್ರತಿಕ್ರಿಯಿಸಿದ ಪೌರಾಯುಕ್ತರು ವಿಂಗಡಣೆ ಮಾಡಿದ ಕಸಗಳನ್ನು ಸ್ಥಳದಿಂದ ಸಾಗಾಟ ಮಾಡದೆ ಬಿಲ್ ಪಾವತಿ ಮಾಡುವಂತಿಲ್ಲ ಎಂದು ಮಾಹಿತಿ ನೀಡಿದರು. ಗುತ್ತಿಗೆದಾರರನ್ನು ಕರೆಯಿಸಿ ಮಾತನಾಡಿ ಕಸ ತೆರವು ಮಾಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಕುಡಿಯುವ ನೀರಿನ ವ್ಯವಸ್ಥೆ

ಈ ಬಾರಿ ಬರ ಪರಿಸ್ಥಿತಿ ಕೊಡಗು ಜಿಲ್ಲೆಯನ್ನೂ ಕಾಡಲಿದೆ. ಹಾಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ, ಅವಶ್ಯವಿರುವೆಡೆ ಕೊಳವೆ ಬಾವಿ ತೆಗೆಯುವದು, ಪೈಪ್‌ಲೈನ್‌ಗಳನ್ನು ಅಳವಡಿಸುವದು ಸೇರಿದಂತೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಸರಕಾರ ಅನುದಾನ ನೀಡಲಿದ್ದು, ಸಮಗ್ರ ವಿವಿರದೊಂದಿಗೆ ಪಟ್ಟಿ ಮಾಡಿ ಸಲ್ಲಿಸುವಂತೆ ಶಾಸಕರು ಹೇಳಿದರು. ಸದಸ್ಯರುಗಳಾದ ಅಪ್ಪಣ್ಣ, ಸತೀಶ್, ಮನ್ಸೂರ್ ಅಹಮದ್, ಅನಿತಾ ಪೂವಯ್ಯ, ಸವಿತಾ ರಾಕೇಶ್, ಜಗದೀಶ್, ಮುದ್ದುರಾಜ್ ಅವರುಗಳು ಕೆಲವೆಡೆ ಇರುವಂತಹ ಕೊಳವೆ ಬಾವಿಗಳನ್ನು ದುರಸ್ತಿಪಡಿಸುವದು, ಅವಶ್ಯವಿರುವೆಡೆ ಹೊಸ ಕೊಳವೆ ಬಾವಿಗಳನ್ನು ತೆಗೆಯುವ ಬಗ್ಗೆ ಸಲಹೆ ನೀಡಿದರು. ಸದಸ್ಯೆ ಶ್ವೇತಾ ಚಾಮುಂಡೇಶ್ವರಿ ನಗರ ವ್ಯಾಪ್ತಿಯಲ್ಲಿ ನೈಸರ್ಗಿಕ ನೀರಿನ ಮೂಲಗಳಿದ್ದು, ಕೊಳವೆ ಬಾವಿ ತೆಗೆದು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಪ್ರತಿಕ್ರಿಯಿಸಿದ ಶಾಸಕರು; ಸರಿಪಡಿಸಬಹುದಾದ ಹಳೆಯ ಕೊಳವೆ ಬಾವಿಗಳು, ಈ ಹಿಂದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿರುವ ವಾರ್ಡ್ಗಳು ಸೇರಿದಂತೆ ಕಳೆದ ಐದು ವರ್ಷಗಳ ವಿವರಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.

೨೫ರಿಂದ ರಾಜಾಸೀಟ್ ರಸ್ತೆ ಕೆಲಸ

ಭೂಮಿ ಪೂಜೆಯಾದರೂ ಇನ್ನೂ ಕೂಡ ಕಾಮಗಾರಿ ಆರಂಭಿಸದ ರಾಜಾಸೀಟ್ ರಸ್ತೆಯನ್ನು ಮುಂದಿನ ತಾ. ೨೫ರಿಂದ ಪ್ರಾರಂಭಿಸುವAತೆ ಶಾಸಕರು ಪೌರಾಯುಕ್ತರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು. ಸಭೆಯಲ್ಲಿ ಸದಸ್ಯ ರಾಜೇಶ್ ಯಲ್ಲಪ್ಪ ಅವರು ವಿಷಯ ಪ್ರಸ್ತಾಪಿಸಿ; ರಾಜಾಸೀಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆಯಾಗಿದ್ದರೂ ಇನ್ನೂ ಕೂಡ ಕೆಲಸ ಆರಂಭಿಸದ ಬಗ್ಗೆ ಗಮನ ಸೆಳೆದರು. ಕೆಲಸ ಮಾಡದ ಬಗ್ಗೆ ಶಾಸಕರು ಪೌರಾಯುಕ್ತರನ್ನು ಪ್ರಶ್ನಿಸಿದರು. ಉತ್ತರಿಸಿದ ಆಯುಕ್ತರು; ಕೆಲಸ ಮಾಡಬೇಕಾದರೆ ರಸ್ತೆ ಪೂರ್ಣ ಬಂದ್ ಮಾಡಬೇಕಾಗಿದೆ. ಬಂದ್ ಮಾಡಲು ಅನುಮತಿ ಕೋರಿ ಹಲವು ಬಾರಿ ಮನವಿ ಮಾಡಿಕೊಂಡರೂ ಅನುಮತಿ ಸಿಗದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ ಎಂದು ಉತ್ತರ ನೀಡಿದರು. ಇದರಿಂದ ಸಿಡಿಮಿಡಿಗೊಂಡ ಶಾಸಕರು; ಅಬ್ಬಿಫಾಲ್ಸ್ ರಸ್ತೆ, ಸಂಪಿಗೆಕಟ್ಟೆ ರಸ್ತೆ, ಹಳೆ ಖಾಸಗಿ ಬಸ್ ನಿಲ್ದಾಣದ ಬಳಿಯ ರಸ್ತೆಗಳನ್ನು ಬಂದ್ ಮಾಡಿ ಬದಲಿ ರಸ್ತೆ ಮೂಲಕ ಸಂಚಾರ ವ್ಯವಸ್ಥೆ ಮಾಡಿ ಕಾಮಗಾರಿ ಮಾಡಲಾಗಿದೆ. ರಾಜಾಸೀಟು ರಸ್ತೆ ಬಂದ್ ಮಾಡಿದರೆ ಪರ್ಯಾಯ ರಸ್ತೆ ವ್ಯವಸ್ಥೆಗಳಿವೆ. ರಸ್ತೆ ಬಂದ್ ಮಾಡಲು ಆಕ್ಷೇಪ ಮಾಡಿದವರು ಯಾರು ಎಂದು ಪ್ರಶ್ನಿಸಿದರಲ್ಲದೆ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಅನುಕೂಲ ಮಾಡಿಕೊಡುವದಲ್ಲ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ತುರ್ತು ಕೆಲಸಗಳನ್ನು ಮಾಡಿಸುವದು ಆಡಳಿತದ ಜವಾಬ್ದಾರಿಯೂ ಆಗಿದೆ. ದಸರಾ ಮುಗಿದ ಬಳಿಕ ತಾ. ೨೫ರಿಂದ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು. ಸಾಧ್ಯವಾಗದಿದ್ದರೆ ಮೇಲ್ಮಟ್ಟದ ಅಧಿಕಾರಿಗಳ ಗಮನ ಸೆಳೆದು ತಾನೇ ಕೆಲಸ ಮಾಡಿಸುವದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಸತೀಶ್; ಜನಪ್ರತಿನಿಧಿಗಳ ಮೇಲೆ ಕಪ್ಪುಚುಕ್ಕಿ ತರುವ ಉದ್ದೇಶದೊಂದಿಗೆ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ. ಹಣ ಇದ್ದರೂ ಕೆಲಸ ಮಾಡುತ್ತಿಲ್ಲವೆಂದರು. ಸದಸ್ಯ ರಾಜೇಶ್ ದನಿಗೂಡಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಚರ್ಚ್ ಮೂಲಕ ರಸ್ತೆಯಿದ್ದು ಆಯುಕ್ತರು ಸದಸ್ಯರುಗಳ ಗಮನಕ್ಕೆ ತಂದಿದ್ದರೆ ವ್ಯವಸ್ಥೆ ಮಾಡಬಹುದಿತ್ತು ಎಂದು ಹೇಳಿದರು.

ಎಲ್ಲ ರಸ್ತೆಗಳು ಆಗಬೇಕು

ಈ ಸಂದರ್ಭದಲ್ಲಿ ನಗರದಲ್ಲಿ ಮುಖ್ಯರಸ್ತೆಗಳಲ್ಲಿ ಮಾತ್ರ ಗುಂಡಿಮುಚ್ಚಲಾಗುತ್ತಿದ್ದು, ಒಳ ರಸ್ತೆಗಳು ಹಾಗೇ ಉಳಿದಿವೆ ಎಂದು ಸದಸ್ಯರುಗಳು ಗಮನ ಸೆಳೆದರು. ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ; ರಸ್ತೆ ಕೆಲಸಕ್ಕೆ ರೂ.೪೦ ಲಕ್ಷ ಮೀಸಲಿಟ್ಟರೂ ೨೦ ಲಕ್ಷಕ್ಕೆ ಟೆಂಡರ್ ಕರೆದಿರುವ ಬಗ್ಗೆ ಪ್ರಶ್ನಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕರು; ೨೦ ಲಕ್ಷದಲ್ಲಿ ಏನೂ ಕೆಲಸ ಆಗುವದಿಲ್ಲ. ಕೇವಲ ದಸರಾ ಸಂದರ್ಭದಲ್ಲಿ ಮಾತ್ರ ಗುಂಡಿ ಮುಚ್ಚಲಾಗುತ್ತದೆ ಎಂದು ಜನವಲಯದಲ್ಲಿ ಮಾತು ಕೇಳಿಬರುತ್ತಿದೆ. ಮುಂದಕ್ಕೆ ಮಳೆಗಾಲಕ್ಕೂ ಮುನ್ನ ಹಾಗೂ ಮಳೆಗಾಲದ ನಂತರ ದಸರಾ ಸಂದರ್ಭದಲ್ಲಿ ಗುಂಡಿ ಮುಚ್ಚುವ ಕೆಲಸ ಆಗಬೇಕು. ಉಳಿದ ೨೦ ಲಕ್ಷಕ್ಕೆ ಟೆಂಡರ್ ಕರೆದು ಎಲ್ಲಾ ರಸ್ತೆಗಳ ದುರಸ್ತಿಪಡಿಸುವಂತೆ ಸೂಚಿಸಿದರು.

ಬೆಳಕು-ಶೌಚಾಲಯ ವ್ಯವಸ್ಥೆ

ದಸರಾ ಹಿನ್ನೆಲೆ ಕೈಗೊಂಡ ಕೆಲಸಗಳ ಬಗ್ಗೆ ಶಾಸಕರು ಮಾಹಿತಿ ಬಯಸಿದರು. ಪ್ರತಿಕ್ರಿಯಿಸಿದ ಪೌರಾಯುಕ್ತರು; ಮಂಟಪ ಹಾಗೂ ಕರಗ ಸಾಗುವ ರಸ್ತೆಗಳನ್ನು ದುರಸ್ತಿಪಡಿಸಲಾಗಿದೆ. ರಾಜಾಸೀಟ್ ರಸ್ತೆಗೆ ವೆಟ್‌ಮಿಕ್ಸ್ ಹಾಗೂ ಎಂ ಸ್ಯಾಂಡ್ ಹಾಕಿ ೯ ದಿನಗಳ ಕಾಲ ನಿರ್ವಹಣೆ ಮಾಡಲಾಗುವದು, ಬನ್ನಿ ಮಂಟಪಕ್ಕೆ ಬಣ್ಣ ಬಳಿಯಲಾಗಿದೆ. ವಾಹನ ನಿಲುಗಡೆಗೆ ಎಪಿಎಂಸಿ ಆವರಣ, ಜೂನಿಯರ್ ಕಾಲೇಜು ಮೈದಾನವನ್ನು ಬಳಸಿಕೊಳ್ಳಲಾಗುವದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ತಾತ್ಕಾಲಿಕ ಶೌಚಾಲಯ, ಕತ್ತಲಿರುವೆಡೆ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.

ಪ್ರತಿಕ್ರಿಯಿಸಿದ ಶಾಸಕರು; ಅಗತ್ಯವಿರುವೆಡೆಗಳಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಬೇಕು. ಇದರೊಂದಿಗೆ ನಗರದಲ್ಲಿರುವ ಎಲ್ಲಾ ಶೌಚಾಲಯಗಳನ್ನು ಆ್ಯಸಿಡ್ ಹಾಕಿ ಸ್ವಚ್ಛಗೊಳಿಸಬೇಕು. ಕತ್ತಲು ಇರುವ ಪ್ರದೇಶಗಲನ್ನು ಗುರುತಿಸಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಮಾಡಬೇಕು. ವಾಹನ ನಿಲುಗಡೆಗೆ ಪೊಲೀಸ್ ಮೈದಾನವನ್ನು ಬಳಸಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಇತರ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಿತು.