ಚೆಟ್ಟಳ್ಳಿ, ಅ. ೮: ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕುಶಾಲನಗರ ತಂಬಾಕು ತನಿಖಾ ತಂಡದ ವತಿಯಿಂದ ಚೆಟ್ಟಳ್ಳಿ ಗ್ರಾಮದಲ್ಲಿ ಅಂಗಡಿ, ಹೊಟೇಲ್ ಹಾಗೂ ಬೇಕರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಾಯಿತು.

ಈ ಸಂದರ್ಭ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ನಿಯಮ ಉಲ್ಲಂಘಿಸಿದ ೮ ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ.೧,೩೦೦ ದಂಡವನ್ನು ಸಂಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಜಂಟಿ ಖಾತೆಗೆ ಜಮೆ ಮಾಡಲಾಯಿತು. ಹೊಟೇಲ್‌ಗಳನ್ನೂ ಪರಿಶೀಲಿಸಿದ ತಂಡ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿತು. ತಪಾಸಣಾ ತಂಡದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಹಿರಿಯ ಆರೋಗ್ಯಾಧಿಕಾರಿ ವಿಶ್ವಜ್ಞ, ಆರೋಗ್ಯಾಧಿಕಾರಿ ಲೋಕೇಶ್ ಹಾಗೂ ಚೆಟ್ಟಳ್ಳಿ ಉಪಠಾಣೆಯ ಆರಕ್ಷಕ ಬಾಳುಗೌಡ ಪಾಟೀಲ್ ಪಾಲ್ಗೊಂಡಿದ್ದರು.