ಚೆಟ್ಟಳ್ಳಿ, ಅ. ೮: ದೇಶಸೇವೆಯ ಸ್ಮರಣೆ, ಮಾಜಿ ಸೈನಿಕರ ಬಾಂಧವ್ಯ ಹಾಗೂ ಕುಟುಂಬಗಳ ಒಗ್ಗಟ್ಟಿಗೆ ಸಾಕ್ಷಿಯಾದ ಕೊಡಗು ಗುಂಡಾಸ್ ವತಿಯಿಂದ ೨ ಮದ್ರಾಸ್ ರೆಜಿಮೆಂಟಿನ ಮಾಜಿ ಸೈನಿಕರ ೩ನೇ ವರ್ಷದ ಸ್ನೇಹಕೂಟ ಹಾಗೂ ಸನ್ಮಾನ ಸಮಾರಂಭ ಮಡಿಕೇರಿಯ ಮೈತ್ರಿ ಪೊಲೀಸ್ ಸಭಾಂಗಣದಲ್ಲಿ ಸಂಭ್ರಮದಿAದ ನಡೆಯಿತು.

ಕೊಡಗು ಗುಂಡಾಸ್‌ನ ಗೌರವ ಸಲಹೆಗಾರರಾದ ಅಲ್ಲಾರಂಡ ಕಾವೇರಪ್ಪ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾಜಿ ಸೈನಿಕರು, ಕುಟುಂಬಸ್ಥರು ಹಾಗೂ ಆಹ್ವಾನಿತ ಗಣ್ಯರು ಪಾಲ್ಗೊಂಡಿದ್ದರು. ದೀಪಾರಾಧನೆ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರನ್ನು ಸ್ಮರಿಸಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಮಾಜಿ ಸೈನಿಕ ತಂಬುಕುತ್ತಿರ ಗಪ್ಪು ಸೋಮಯ್ಯ ಅವರು ಸ್ವಾಗತಿಸಿದರು.

ಮಾಜಿ ಸೈನಿಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಆರ್.ಎಫ್.ಓ ಆಗಿ ಸೇವೆ ಸಲ್ಲಿಸುತ್ತಿರುವ ಪರದಂಡ ಅರುಣ್ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಗೌರವಾಧ್ಯಕ್ಷರಾದ ಕೊಟ್ಟುಕತ್ತಿರ ಸೋಮಣ್ಣ ಅವರನ್ನು ಸ್ಮರಣ ಫಲಕ ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಐವರು ಹಿರಿಯ ಮಾಜಿ ಯೋಧರು ಹಾಗೂ ಅವರ ಧರ್ಮಪತ್ನಿಯರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಳಕಂಡ ನಾಚಪ್ಪ, ಮಣಿ, ಚೆನ್ನಕೇಶವ, ನಂಗಾರು ಬಸವರಾಜು ಹಾಗೂ ಮಲ್ಲೇಶ್ ಅವರು ಸನ್ಮಾನಿತರಾದ ಹಿರಿಯ ಮಾಜಿ ಯೋಧರಾಗಿದ್ದಾರೆ.

ಪ್ರತಿಭೆಗೆ ಪುರಸ್ಕಾರ

ಮಾಜಿ ಸೈನಿಕರ ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ೨೦೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಾಲಿ ಕುಮಾರ್ ಬಿ.ಜಿ. ಹಾಗೂ ವಿಂಧ್ಯಾ ಬಿ.ಜೆ ಅವರ ಪುತ್ರಿ ಇಂಚರಾ ಮುತ್ತಮ್ಮ ಬಿ.ಜೆ ೫೭೪/೬೦೦ ಅಂಕ ಗಳಿಸಿ ಸಾಧನೆ ಮಾಡಿದರೆ, ಕೇಶವ ಬಿ.ಎ ಹಾಗೂ ವಿದ್ಯಾ ಬಿ.ಎಸ್ ಅವರ ಪುತ್ರ ಶರತ್ ಬಿ.ಕೆ ೫೨೩/೬೦೦ ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸಂಘಟನೆ ವತಿಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾಜಿ ಸೈನಿಕರ ಏಳಿಗೆಗೆ ಕುಟುಂಬಗಳ ಒಗ್ಗಟ್ಟು, ಸಂಘಟನೆಯ ಬಲವರ್ಧನೆ ಹಾಗೂ ಮುಂದಿನ ಪೀಳಿಗೆಗೆ ದೇಶಸೇವೆಯ ಆದರ್ಶವನ್ನು ಪರಿಚಯಿಸುವ ಕುರಿತು ಚರ್ಚಿಸಲಾಯಿತು. ಮನೆಯಪ್ಪನ ನಾಣಯ್ಯ ಅವರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮ ಮುಕ್ತಾಯಗೊಂಡಿತು.