ಶನಿವಾರಸಂತೆ, ಅ. ೮: ಕೊಡಗು ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ದೇಶದ ಅಖಂಡತೆ, ಏಕತೆ, ಮತ್ತು ಆಂತರಿಕ ಸುರಕ್ಷತೆಗೆ ಧಕ್ಕೆ ತರುತ್ತಿರುವ ಅಕ್ರಮ ಬಾಂಗ್ಲಾದೇಶಿ (ಅಸ್ಸಾಂ ಮತ್ತು ಬಿಹಾರಿ ಕೆಲಸಗಾರರ ಬಿಟ್ಟು) ವಲಸೆಗಾರರ ಗಡಿಪಾರಿಗಾಗಿ ಹಮ್ಮಿಕೊಂಡಿರುವ ಜನಜಾಗೃತಿ ಆಂದೋಲನ ಪ್ರಯುಕ್ತ ಆಗಮಿಸಿದ ಭಾರತ ಮಾತೆಯ ರಥಕ್ಕೆ ಭಾನುವಾರ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಹಿಂದೂ ಜಾಗರಣಾ ವೇದಿಕೆ, ಭಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು. ನಂತರ ಗೋಪಾಲಪುರ - ಶನಿವಾರಸಂತೆ ಮುಖ್ಯರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನ ಮತ್ತಿತರ ವಾಹನಗಳ ಜಾಥಾದ ಜತೆ ಭಾರತ ಮಾತೆಯ ರಥ ಮೆರವಣಿಗೆಯಲ್ಲಿ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡಿತು.

ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಂಘಟನಾ ಪ್ರಮುಖರಾದ ಚಿ.ನಾ. ಸೋಮೇಶ್ ಮಾತನಾಡಿ, ಗಾಂಧೀಜಿಯವರ ಅಹಿಂಸಾ ತತ್ವವನ್ನು ಹೇಳಿಕೊಂಡು ಸ್ವಾತಂತ್ರ‍್ಯ ಪಡೆದೆವೋ ಅದಕ್ಕೊಸ್ಕರ ಅನೇಕರ ವೀರಬಲಿದಾನ ನಡೆಯಿತೋ ಅಂತಹ ವೀರಸಾರ್ವಕರ್, ಛತ್ರಪತಿ ಶಿವಾಜಿ, ರಾಮಕೃಷ್ಣ ಪರಮಹಂಸರAತಹ ಗುರುಗಳ ಅನುಯಾಯಿಗಳಾಗಿ ಬಾಳುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಭಾರತದ ಗಡಿಯೊಳಗೆ ನುಸುಳಿ ಬಂದ ಪರದೇಶಿ ವಲಸಿಗರು ರಾಜ್ಯದ ರೈಲ್ವೆ ಸ್ಟೇಶನ್‌ಗಳಲ್ಲಿ ಲಗ್ಗೆಯಿಟ್ಟು ಕೊಡಗಿನ ಕಾಫಿ ತೋಟಗಳಲ್ಲೂ ಸೇರಿಕೊಂಡಿದ್ದಾರೆ. ಭಯೋತ್ಪಾದನೆ ಮತ್ತಿತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ದೇಶದ ಆತಂರಿಕ ಮತ್ತು ಸ್ಥಳೀಯ ಸುರಕ್ಷತೆಗೆ ಗಂಭೀರ ಸವಾಲನ್ನೊಡ್ಡಿ ಆತಂಕ ಉಂಟುಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಪುನೀತ್ ತಾಳೂರು, ಸೋಮಶೇಖರ್ ಪೂಜಾರಿ, ದಿನೇಶ್, ಭಜರಂಗದಳದ ಮುಖಂಡರಾದ ತನ್ಮಯ್, ಧನಂಜಯ್, ಬಿಜೆಪಿ ಪ್ರಮುಖರಾದ ಬಿ.ಎಸ್. ಅನಂತ್ ಕುಮಾರ್, ಎಸ್.ಎನ್. ರಘು, ಎ.ಆರ್. ರಕ್ಷಿತ್, ಎಂ.ಜೆ. ವಿನೋದ್, ಯತೀಶ್, ಅಶ್ವಥ್, ಸಂಘಪರಿವಾರದವರು, ಹಿಂದೂ ಬಾಂಧವರು ಪಾಲ್ಗೊಂಡಿದ್ದರು.