ಕುಶಾಲನಗರ, ಅ. ೭: ಪಟ್ಟಣದ ಸಮೀಪದ ಬಸವನಹಳ್ಳಿ ಬಳಿ ಮಡಿಕೇರಿ ರಸ್ತೆಯಲ್ಲಿ ಸುಮಾರು ರೂ. ೮ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನೂತನ ಕುಶಾಲನಗರ ಬಸ್ ಘಟಕ ಉದ್ಘಾಟನೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಘಟಕ ಲೋಕಾರ್ಪಣೆಯಾಗುವ ನಿರೀಕ್ಷೆಯಿದ್ದು, ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ತಾಲೂಕು ಕೇಂದ್ರಕ್ಕೆ ನಿರ್ಮಿಸಲಾಗಿರುವ ನೂತನ ಬಸ್ ಘಟಕ ಜೂನ್ ತಿಂಗಳಲ್ಲೇ ಲೋಕಾರ್ಪಣೆಗೆ ಸಿದ್ಧಗೊಂಡಿತ್ತು. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ಬದಲಾವಣೆ ಸೇರಿದಂತೆ ಆಡಳಿತಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಸದ್ಯ ಘಟಕದಲ್ಲಿ ಪೆಟ್ರೋಲ್ ಪಂಪ್ ಅಳವಡಿಕೆ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಮೂಲಸೌಕರ್ಯ ಕಾಮಗಾರಿಗಳು ಶೇ.೯೮ರಷ್ಟು ಪೂರ್ಣಗೊಂಡಿವೆ ಎಂದು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗೀಯ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ನೂತನ ಘಟಕ ಆರಂಭಗೊAಡ ಬಳಿಕ ಕುಶಾಲನಗರದಿಂದ ವಿವಿಧ ಮಾರ್ಗಗಳಿಗೆ ಬಸ್ ಸಂಚಾರ ನಿರ್ವಹಣೆ ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಉದ್ಘಾಟನಾ ದಿನಾಂಕವನ್ನು ಅಂತಿಮಗೊಳಿಸಲಾಗುವುದು. ಬಳಿಕ ನೂತನ ಬಸ್ ಘಟಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ. - ಚಂದ್ರಮೋಹನ್