ಚೆಯ್ಯಂಡಾಣೆ, ಅ. ೬: ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ಜೆಎಂ) ವತಿಯಿಂದ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುವ ಪ್ರತಿಭೋತ್ಸವದ ಕೊಡಗು ಜಿಲ್ಲಾಮಟ್ಟದ ಸ್ಪರ್ಧೆಯ ಘೋಷಣಾ ಕಾರ್ಯಕ್ರಮ ವೀರಾಜಪೇಟೆಯಲ್ಲಿ ಇತ್ತೀಚೆಗೆ ನಡೆಯಿತು.
ವೀರಾಜಪೇಟೆಯ ಅನ್ವಾರುಲ್ ಹುದಾ ಸಭಾಂಗಣದಲ್ಲಿ ಎಸ್.ಜೆ.ಎಂ. ಕೊಡಗು ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ಜೆಎಂ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉದ್ಘಾಟಿಸಿದರು.
ಅನ್ವಾರುಲ್ ಹುದಾ ಸಂಸ್ಥೆಯ ಶಿಲ್ಪಿ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಅವರು ಜಿಲ್ಲಾಮಟ್ಟದ ಪ್ರತಿಭೋತ್ಸವದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದರು.
ಡಿಸೆಂಬರ್ ೬ ರಂದು ಹುಂಡಿ ಗ್ರಾಮದ ಹಿದಾಯತ್ತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಜಿಲ್ಲಾಮಟ್ಟದ ಪ್ರತಿಭೋತ್ಸವ ನಡೆಯಲಿದ್ದು, ಜಿಲ್ಲೆಯ ಆರು ರೇಂಜ್ಗಳಿAದ ೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಎಸ್ಜೆಎಂ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮದನಿ, ಕಾರ್ಯದರ್ಶಿಗಳಾದ ಇಬ್ರಾಹಿಂ ನಈಮಿ ಹಾಗೂ ಶರೀಫ್ ಸಖಾಫಿ, ರಾಜ್ಯ ಪ್ರತಿಭೋತ್ಸವ ಸಮಿತಿ ಚೇರ್ಮನ್ ಸಿರಾಜ್ ಸಅದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್.ಜೆ.ಎಂ. ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಂಶುದ್ದೀನ್ ಅಮ್ಜದಿ ಸ್ವಾಗತಿಸಿದರು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಚೇರ್ಮನ್ ಅಹ್ಮದ್ ಮದನಿ ವಂದಿಸಿದರು.