ಐಗೂರು, ಅ. ೫: ಐಗೂರು ಗ್ರಾಮದ ವಿಜಯನಗರದಲ್ಲಿ ಶ್ರೀ ಗಜಾನನ ಯುವಕ ಸಂಘದ ವತಿಯಿಂದ ಗುಳಿಗಪ್ಪ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೨೯ನೇ ವರ್ಷದ ಗೌರಿ - ಗಣೇಶ ಮೂರ್ತಿಯನ್ನು ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು. ಪ್ರತಿಷ್ಠಾಪನೆಗೊಂಡ ಬಳಿಕ ಪ್ರತಿದಿನ ಹೋಮ, ಹವನ, ಪೂಜೆ, ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆದವು. ವಿಸರ್ಜನೋತ್ಸವದ ದಿನದಂದು ದೇವರ ಮೂರ್ತಿಯನ್ನು ಭವ್ಯ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಹೊರಟ ಮೆರವಣಿಗೆಯು ಗುಳಿಗಪ್ಪ ದೇವಾಲಯದವರೆಗೆ ತೆರಳಿ ವಾಪಾಸು ಅದೇ ಮಾರ್ಗವಾಗಿ ಐಗೂರಿಗೆ ಬರುವಾಗ ಮನೆಗಳ ಮುಂದೆ ಭಕ್ತರು ಗಣಪನಿಗೆ ಹಣ್ಣುಕಾಯಿ ಪೂಜೆ ಸಲ್ಲಿಸಿದರು.
ಡಿಜೆ ಮತ್ತು ಪುತ್ತೂರಿನ ಎಸ್ಆರ್ಕೆ ಬ್ಯಾಂಡ್ ವಾದನವು ಶೋಭಾಯಾತ್ರೆಗೆ ವೈಭವ ನೀಡಿತು. ಶೋಭಾಯಾತ್ರೆಯಲ್ಲಿ ಗ್ರಾಮದ ವೃದ್ಧರು, ಯುವಕರು ಮತ್ತು ಮಹಿಳೆಯರು ಕುಣಿದು ಕುಪ್ಪಳಿಸಿದರು. ಶೋಭಾಯಾತ್ರೆಯು ಮುಂದೆ ಸಾಗಿ ಐಗೂರಿನ ಚೋರನ ಹೊಳೆಯ ಬದಿಯಲ್ಲಿ ಪೂಜಾರಿ ಅಚ್ಚುತ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಿದ ನಂತರ ಹೊಳೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸೋಮವಾರಪೇಟೆಯ ಆರಕ್ಷಕ ಠಾಣೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಮಿತಿಯ ಸದಸ್ಯರು ಪೊಲೀಸರ ಜೊತೆ ಕೈಜೋಡಿಸಿದರು. ಉತ್ಸವದ ಯಶಸ್ವಿಗೆ ದೇವಾಲಯದ ಸಮಿತಿ ಸದಸ್ಯರು, ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಸಹಕರಿಸಿದರು.