ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ಅ. ೪: ಅರೇಬಿಕಾ ಕಾಫಿಗಿಡದ ಹೊರಮೈ ಹಸಿರಾಗಿದ್ದರೂ, ಅದರ ಕಾಂಡದೊಳಗೆ ಅಡಗಿರುವ ಬಿಳಿಕಾಂಡ ಕೊರಕ ಕೀಟ ಮಾತ್ರ ಗಿಡದ ಜೀವವನ್ನೇ ಕಬಳಿಸುತ್ತಿರಬಹುದು. ಕಾಂಡ ದೊಳಗೆ ಸುರಂಗ ಕೊರೆದು ಬೆಳವಣಿಗೆ ಹಾಗೂ ಇಳುವರಿಗೆ ಹೊಡೆತ ನೀಡುವ ಈ ಕೀಟ, ತೀವ್ರ ಹಾವಳಿಯಲ್ಲಿ ವರ್ಷಗಳಷ್ಟು ಬೆಳೆದು ನಿಂತ ಕಾಫಿಗಿಡವನ್ನೇ ನಾಶಪಡಿಸುವ ಅಪಾಯ ಹೊಂದಿದೆ. ಇದೀಗ ಬಿಳಿಕಾಂಡ ಕೊರಕದ ಹಾರಾಟಕ್ಕೆ ಕಾಲ ಸಮೀಪಿಸಿದ್ದು, ಅರೇಬಿಕಾ ವಲಯಗಳಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಕೀಟಗಳು ಹೊರಬರುವ ಸಾಧ್ಯತೆ ಇದೆ. ಹೀಗಾಗಿ ಕೀಟ ಹಾರಾಟಕ್ಕೂ ಮುನ್ನವೇ ತೋಟಗಳಲ್ಲಿ ನಿಯಂತ್ರಣ ಕ್ರಮಗಳನ್ನು ಚುರುಕು ಗೊಳಿಸುವಂತೆ ಕೇಂದ್ರ ಕಾಫಿ ಮಂಡಳಿ ಬೆಳೆಗಾರರಿಗೆ ಸೂಚಿಸಿದೆ.
ಕೀಟದ ಹಾರಾಟದ ಅವಧಿಯಲ್ಲಿ ವಯಸ್ಕ ಹುಳುಗಳು ಹೊರಬಂದು ಹೊಸ ಗಿಡಗಳ ಕಾಂಡ ಹಾಗೂ ದಪ್ಪ ರೆಂಬೆಗಳ ತೊಗಟೆಯ ಸಂದುಗೊAದುಗಳಲ್ಲಿ ಮೊಟ್ಟೆ ಇಡುವ ಸಾಧ್ಯತೆ ಇರುವುದರಿಂದ, ‘ಕೀಟ ಕಾಣಿಸಿಕೊಂಡ ಬಳಿಕ ಕ್ರಮ’ಕ್ಕಿಂತ ‘ಕೀಟ ಹೊರಬರುವ ಮುನ್ನವೇ ತಡೆ’ ಈಗಿನ ಅಗತ್ಯವಾಗಿದೆ.
ಬಾಧಿತ ಗಿಡಗಳನ್ನು ಗುರುತಿಸಿ ಬೇರುಸಹಿತ ಕಿತ್ತುಹಾಕುವ ಕಾರ್ಯವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಅಥವಾ ಅಕ್ಟೋಬರ್ ಮೊದಲ ವಾರದೊಳಗೆ ಪೂರ್ಣಗೊಳಿಸಬೇಕು. ವಿಳಂಬವಾದರೆ ಬಾಧಿತ ಗಿಡಗಳಿಂದ ವಯಸ್ಕ ಕೀಟಗಳು ಹೊರಬಂದು ಹಾವಳಿ ಮತ್ತಷ್ಟು ಹರಡುವ ಸಾಧ್ಯತೆ ಇದೆ.
ಕಾಂಡದೊಳಗಿನ ಸುರಂಗವೇ ಅಪಾಯದ ಮೂಲ
ಬಿಳಿಕಾಂಡ ಕೊರಕದ ಮರಿ ಹುಳುಗಳು ಕಾಫಿ ಗಿಡದ ಕಾಂಡದ ಒಳಭಾಗವನ್ನು ಕೊರೆದು ಸುರಂಗ ನಿರ್ಮಿಸುತ್ತವೆ. ಹಾವಳಿ ಹೆಚ್ಚಾದಂತೆ ಗಿಡದ ಬೆಳವಣಿಗೆ ಕುಂಠಿತವಾಗಿ ಎಲೆಗಳು ಮಂಕಾಗಬಹುದು, ಫಸಲು ಕಡಿಮೆಯಾಗಬಹುದು ಹಾಗೂ ಗಿಡ ಸೊರಗಿ ಒಣಗಬಹುದು. ಕಾಂಡದಲ್ಲಿ ಕಾಣಿಸುವ ಉಂಗುರಾಕಾರದ ಗುರುತುಗಳು ಮತ್ತು ಗಿಡದ ದುರ್ಬಲ ಬೆಳವಣಿಗೆಯನ್ನು ಬೆಳೆಗಾರರು ನಿರ್ಲಕ್ಷಿಸಬಾರದು.
ಬಾಧಿತ ಗಿಡ: ಕಿತ್ತುಹಾಕುವುದೇ ಮೊದಲ ಕ್ರಮ
ಕೀಟಬಾಧಿತ ಗಿಡಗಳನ್ನು ಗುರುತಿಸಿದ ಕೂಡಲೇ ಬೇರುಸಹಿತ ಕಿತ್ತುಹಾಕಬೇಕು. ಕಿತ್ತುಹಾಕಿದ ಕಾಂಡಗಳನ್ನು ಸುಡುವುದು ಅಥವಾ ಸುಮಾರು ೧೦ ದಿನಗಳ ಕಾಲ ನೀರಿನಲ್ಲಿ ಮುಳುಗಿಸಿಡುವುದು ಅಗತ್ಯ. ಇದರಿಂದ ಕೀಟದ ವಿವಿಧ ಹಂತಗಳನ್ನು ನಾಶಪಡಿಸಲು ಸಾಧ್ಯವಾಗುತ್ತದೆ.
ಆದರೆ ಸ್ವಲ್ಪ ಪ್ರಮಾಣದ ಬಾಧೆಯಿದ್ದು ಉತ್ತಮ ಫಸಲು ಹೊಂದಿರುವ ಅನುಮಾನಾಸ್ಪದ ಗಿಡಗಳನ್ನು ಉಳಿಸಿಕೊಳ್ಳಲು ಅವಕಾಶವಿದೆ. ಅಂತಹ ಗಿಡಗಳ ಮುಖ್ಯ ಕಾಂಡ ಮತ್ತು ದಪ್ಪ ಪ್ರಾಥಮಿಕ ರೆಂಬೆಗಳನ್ನು ೧ ಮಿ.ಮೀ. ದಪ್ಪದ ನಾನ್-ವೋವೆನ್ ಬಟ್ಟೆಯ ಪಟ್ಟಿಗಳಿಂದ ಸುತ್ತುವ ಮೂಲಕ ವಯಸ್ಕ ಕೀಟಗಳು ಹೊರಬರುವುದನ್ನು ತಡೆಯಬಹುದು.
ಆರೋಗ್ಯಕರ ಗಿಡಕ್ಕೆ ಸುಣ್ಣದ ರಕ್ಷಾಕವಚ
ಉಳಿದ ಆರೋಗ್ಯಕರ ಗಿಡಗಳನ್ನು ರಕ್ಷಿಸಲು ಮುಖ್ಯ ಕಾಂಡ ಹಾಗೂ ದಪ್ಪ ಪ್ರಾಥಮಿಕ ರೆಂಬೆಗಳಿಗೆ ೧೦ರಷ್ಟು ಸುಣ್ಣದ ದ್ರಾವಣ ಸಿಂಪಡಿಸುವAತೆ ಸಂಸ್ಥೆ ಸಲಹೆ ನೀಡಿದೆ. ೨೦೦ ಲೀಟರ್ ನೀರಿಗೆ ೨೦ ಕೆ.ಜಿ. ಸ್ಪ್ರೇ ಸುಣ್ಣ, ೨೦೦ ಮಿ.ಲೀ. ಡಿಡಿಎಲ್ ಫೆವಿಕಾಲ್ ಮತ್ತು ೨೦೦ ಮಿ.ಲೀ. ಸೂಪರ್ ಸ್ಪ್ರೆಡರ್ ಬೆರೆಸಿ ಸಿಂಪಡಿಸಬೇಕು.
ಎಕರೆಗೆ ೧೦ ಫೆರೋಮೋನ್ ಬಲೆ
ಕೀಟದ ಹಾರಾಟದ ಅವಧಿಯಲ್ಲಿ ನಿಗಾ ಮತ್ತು ನಿಯಂತ್ರಣಕ್ಕಾಗಿ ಅಕ್ಟೋಬರ್ ಮೊದಲ ೧೫ ದಿನಗಳೊಳಗೆ ಎಕರೆಗೆ ೧೦ ಫೆರೋಮೋನ್ ಬಲೆಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.
ಈಗಲೇ ತೋಟಕ್ಕೆ ಇಳಿಯಬೇಕಾದ ಸಮಯ
ಅರೇಬಿಕಾ ಕಾಫಿ ವರ್ಷಗಳ ಆರೈಕೆಯ ಬೆಳೆ. ಒಂದು ಬಾಧಿತ ಗಿಡವನ್ನು ನಿರ್ಲಕ್ಷಿಸುವುದು ಪಕ್ಕದ ಗಿಡಗಳಿಗೂ ಅಪಾಯವನ್ನು ಆಹ್ವಾನಿಸಿದಂತಾಗಬಹುದು. ಹೀಗಾಗಿ ಅಕ್ಟೋಬರ್ ಹಾರಾಟಕ್ಕೂ ಮುನ್ನವೇ ತೋಟವನ್ನು ಪರಿಶೀಲಿಸಿ, ಬಾಧಿತ ಗಿಡಗಳನ್ನು ಗುರುತಿಸಿ, ಅಗತ್ಯವಿರುವ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಈಗ ಬೆಳೆಗಾರರ ಮುಂದಿರುವ ತುರ್ತು ಕಾರ್ಯ. ಕಾಂಡದೊಳಗೆ ಅಡಗಿರುವ ಕೀಟ ಕಾಣಿಸಿಕೊಳ್ಳುವ ಹೊತ್ತಿಗೆ ಹಾನಿ ಆರಂಭವಾಗಿರುತ್ತದೆ; ಹೀಗಾಗಿ ಕೀಟ ಹೊರಬರುವ ಮುನ್ನವೇ ತಡೆಗಟ್ಟುವುದೇ ಪರಿಣಾಮಕಾರಿ ರಕ್ಷಣೆಯ ಮೊದಲ ಹೆಜ್ಜೆ. ಹೆಚ್ಚಿನ ವಿವರಗಳಿಗೆ ಸಮೀಪದ ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದು.