ಸಿದ್ದಾಪುರ, ಅ. ೩: ಭಾರತ ದೇಶಕ್ಕೆ ಅಕ್ರಮವಾಗಿ ಬಂದಿರುವ ಬಾಂಗ್ಲಾದೇಶಿಯರನ್ನು ನಮ್ಮ ದೇಶದಿಂದ ಹೊರದಬ್ಬಬೇಕೆಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು.

ಕೊಡಗು ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ಜನಜಾಗೃತಿ ಆಂದೋಲನ ಜಾಥಾವನ್ನು ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಸ್ವಾಗತಿಸಿ, ಬಳಿಕ ಮಾತನಾಡಿದ ಅವರು; ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಬಾಂಗ್ಲಾದೇಶಿಯರು ನೆಲೆಸಿದ್ದಲ್ಲಿ ಅವರುಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಅವರನ್ನು ಹೊರದಬ್ಬಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ವಿಮಾನ ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಭಯೋತ್ಪಾದನೆ ನಡೆಸುತ್ತಿರುವ ವ್ಯಕ್ತಿ ಚೂರಿ ಇರಿದು ವಿಮಾನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದರೂ, ವಿಮಾನ ಚಾಲನೆ ಮಾಡುತ್ತಿದ್ದ ವ್ಯಕ್ತಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ಯ ಬಗ್ಗೆ ದೇಶ ಹಾಗೂ ವಿದೇಶದಲ್ಲಿ ಮೆಚ್ಚುವಂತಹ ವಿಚಾರವಾಗಿದೆ ಎಂದರು.

ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ ಎಸ್‌ಐಆರ್ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ದಕ್ಷಿಣ ಭಾರತದ ಪಶ್ಚಿಮ ಬಂಗಾಳ ಇನ್ನಿತರ ರಾಜ್ಯಗಳಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಯರು ನೆಲೆಸಿರುವುದು ಪತ್ತೆಯಾಗಿರುವ ಪ್ರಕರಣಗಳು ಕಂಡುಬAದಿದೆ. ಮಲೆನಾಡು ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಎಂಬ ಕಾರಣದಿಂದಾಗಿ ಹೊರ ರಾಜ್ಯದ ಅಸ್ಸಾಮಿನ ಕಾರ್ಮಿಕರು ಕೆಲಸ ಮಾಡುತ್ತಿದ್ದು ಇದರಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಸಮಸ್ಯೆ ಎದುರಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಡಿಮೆ ಸಂಬಳ ಪಡೆದುಕೊಳ್ಳುವ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಹೊರದೇಶದಿಂದ ಕಾರ್ಮಿಕರು ಬಂದು ನೆಲೆಸುವ, ಸಾಧ್ಯತೆ ಇದ್ದು ಈ ಬಗ್ಗೆ ತೋಟದ ಮಾಲೀಕರುಗಳು ಎಚ್ಚರ ವಹಿಸಬೇಕೆಂದು ತಿಳಿಸಿದರು. ತಾ. ೯ ರಂದು ಕೊಡಗು ಸುರಕ್ಷಾ ಆಂದೋಲನ ಸಮಿತಿಯ ವತಿಯಿಂದ ಜನಜಾಗೃತಿ ಆಂದೋಲನದ ಸಮಾರೋಪ ಸಮಾರಂಭ ಮಡಿಕೇರಿಯಲ್ಲಿ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಲೋಕೇಶ್ ಮನವಿ ಮಾಡಿದರು . ಕಾರ್ಯಕ್ರಮದಲ್ಲಿ ಜನಜಾಗೃತಿ ಆಂದೋಲನದ ಸಮಿತಿಯ ಪ್ರಮುಖರಾದ ಚಂದ್ರ ಉಡೋತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೆಲ್ಲಿ ಹುದಿಕೇರಿ ಗ್ರಾಮದ ಶಕ್ತಿಕೇಂದ್ರದ ಪ್ರಮುಖ್ ಬೆಳ್ಳಿಯಪ್ಪ, ಬಿ.ಜೆ.ಪಿ ಪಕ್ಷದ ಪ್ರಮುಖರಾದ ಹಳಗದ್ದೆ ಭಾನುಪ್ರಕಾಶ್ , ಪದ್ಮನಾಭ , ಶರಣ್ ಟಿ.ಸಿ. ಅಶೋಕ್ , ಸುರೇಶ್ , ಧರ್ಮ ಲಿಂಗ ಇನ್ನಿತರರು ಪಾಲ್ಗೊಂಡಿದ್ದರು.