ಮಡಿಕೇರಿ, ಅ. ೩; ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಮಕ್ಕಂದೂರು-ಮುಕ್ಕೋಡ್ಲು ಗೌಡ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಸಂತೋಷಕೂಟದಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಭ್ರಮಿಸಿದರು.
ಗ್ರಾಮ ದೇವತೆ ಶ್ರೀ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಂಪ್ರದಾಯದAತೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ವಿಎಸ್‌ಎಸ್‌ಎನ್ ಸಭಾಂಗಣಕ್ಕೆ ತೆರಳಲಾಯಿತು. ಸಭಾಂಗಣದಲ್ಲಿ ಸಮಾಜದ ಸದಸ್ಯರುಗಳ ಮಕ್ಕಳು ಹಾಗೂ ಮಹಿಳೆಯರಿಗೆ ವಿವಿಧ ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವದು, ಬಾಲಕರಿಗೆ ತಲೆ ಮೇಲೆ ಕಪ್ ಇಟ್ಟು ಓಟ, ಗೋಣಿ ಚೀಲ ಓಟ, ಬಾಲಕಿಯರಿಗೆ ನಿಂಬೆ ಚಮಚ ಓಟ ಹಾಗೂ ಮಹಿಳೆಯರಿಗೆ ಬಾಂಬ್ ಇನ್ ದ ಸಿಟಿ ಆಟೋಟಗಳನ್ನು ಏರ್ಪಡಿಸಿದ್ದು, ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು.
ಬಡವರಿಗೆ ಸಹಾಯ ಮಾಡಬೇಕು
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯರು, ಗೌಡ ಸಮಾಜದ ಸ್ಥಳ ದಾನಿಗಳೂ ಆಗಿರುವ ಕುಂಬಗೌಡನ ಪುಷ್ಪ ಉತ್ತಪ್ಪ ಅವರು ಮಾತನಾಡಿ; ಸಮಾಜ ಬಾಂಧವರು ಎಲ್ಲರೂ ಒಟ್ಟಾಗಿ ಬಾಳಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸುವದರೊಂದಿಗೆ ಉಳಿಸಿ ಬೆಳೆಸಬೇಕು. ಪುಸ್ತಕಗಳನ್ನು ಓದುವದರೊಂದಿಗೆ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವದರೊಂದಿಗೆ ಒದುವ ಹವ್ಯಾಸವನ್ನು ಕಲಿಸಬೇಕು. ಇದರೊಂದಿಗೆ ಪ್ರಮುಖವಾಗಿ ಬಡವರಿಗೆ ಸಹಾಯ ಮಾಡಬೇಕೆಂದು ಕರೆ ನೀಡಿದರು.
ನೆಮ್ಮದಿ ಸಿಗಲಿದೆ
ಪಶು ವೈದ್ಯಾಧಿಕಾರಿ ನಂಗಾರು ಮೋಹನ್‌ಕುಮಾರ್ ಮಾತನಾಡಿ; ಜನಾಂಗ ಬಾಂಧವರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಇಂತಹ ಸಂದರ್ಭಗಳಲ್ಲಿ ಕಷ್ಟ ಸುಖ ಹಂಚಿಕೊಳ್ಳುವದರೊAದಿಗೆ ಒಂದಿಷ್ಟು ನೆಮ್ಮದಿ ಸಿಗಲಿದೆ. ಎಂದು ಹೇಳಿದರು. ಇದರೊಂದಿಗೆ ಮುಂದಿನ ಸಾಲಿನಿಂದ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡುವ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ನೀಡುವದಾಗಿ ಘೋಷಿಸಿದರು.
ಮುಂದೆ ಬರಬೇಕು
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ತೂಟೇರ ರೀಟಾ ಜಯಪ್ರಕಾಶ್ ಮಾತನಾಡಿ; ನಮ್ಮ ಸಂಸ್ಕೃತಿಯ ಪದ್ಧತಿಗಳನ್ನು ಎಲ್ಲರೂ ಸೇರಿ ಆಚರಣೆ ಮಾಡಬೇಕು. ಎಲ್ಲರೂ ಮುಂದೆ ಬಂದು ಸಮಾಜಕ್ಕೆ ಕೀರ್ತಿ ತರಬೇಕು, ಈ ನಿಟ್ಟಿನಲ್ಲಿ ಮಹಿಳಾ ಒಕ್ಕೂಟ ರಚನೆ ಮಾಡಲಾಗಿದ್ದು, ಎಲ್ಲರೂ ಮುಂದೆ ಬಂದು ಮುನ್ನಡೆಸಬೇಕು ಎಂದರು. ಹಬ್ಬಾಚರಣೆಗಳನ್ನು ಮನೆಗಳಲ್ಲಿ ಆಚರಿಸುತ್ತೇವೆಯಾದರೂ ಎಲ್ಲರೂ ಒಗ್ಗೂಡಿ ಆಚರಿಸುವದರಲ್ಲಿ ಅರ್ಥವಿದೆ ಎಂದು ಹೇಳಿದರು.
ಕೈಜೋಡಿಸಬೇಕು
ಸಂಘದ ಸದಸ್ಯ, ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ; ನಮ್ಮ ಸಂಸ್ಕೃತಿಯ ಆಚರಣೆ, ಪದ್ಧತಿಗಳು ಸಾಮಾನ್ಯವಾಗಿ ತಿಳಿದಿರುತ್ತದೆ, ಎಲ್ಲರ ಮನೆಗಳಲ್ಲೂ ಆಚರಿಸುತ್ತೇವೆ. ಆದರೆ, ಸಮಾಜದಲ್ಲಿ ಒಗ್ಗಟ್ಟು, ಬಾಂಧವ್ಯ ಬೆಸೆಯುವ ಸಲುವಾಗಿ ಈ ರೀತಿ ಸಮಾಜಗಳ ಮುಖಾಂತರ ಆಚರಿಸಲಾಗುತ್ತಿರುವದು ಸಂತೋಷದ ವಿಚಾರ. ಆಟೋಟ. ಪ್ರತಿಭಾ ಪುರಸ್ಕಾರದೊಂದಿಗೆ ಮಕ್ಕಳನ್ನು ಪ್ರೋತ್ಸಾಹಿಸುವದಲ್ಲದೆ, ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೂ ಪರಿಚಯಿಸಿದಂತಾಗುತ್ತದೆ ಎಂದು ಹೇಳಿದರು. ಸಮಾಜದ ಪದಾಧಿಕಾರಿಗಳು ಶ್ರಮವಹಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಹಿರಿಯರ ಶ್ರಮ ಅಡಗಿದೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಮಾತನಾಡಿ; ಮಕ್ಕಂದೂರು-ಮುಕ್ಕೋಡ್ಲು ವ್ಯಾಪ್ತಿಗೆ ಸೇರಿದ ಸಮಾಜ ಬಾಂಧವರನ್ನು ಒಂದುಗೂಡಿಸುವ ಸಲುವಾಗಿ ಹಿರಿಯರು ಶ್ರಮವಹಿಸಿ ಗೌಡ ಸಮಾಜ ಕಟ್ಟಿದ್ದಾರೆ. ಅದನ್ನು ಮುನ್ನಡೆಸಿಕೊಂಡು ಹೋಗುವದು ನಮ್ಮ ನಿಮ್ಮೆಲ್ಲರ ಕರ್ತವ್ಯದೊಂದಿಗೆ ಜವಾಬ್ದಾರಿ ಕೂಡ. ಸಮಾಜದ ವತಿಯಿಂದ ಕೈಗೊಳ್ಳಲಾಗುವ ಮುಂದಿನ ಎಲ್ಲ ಕಾರ್ಯಚಟುವಟಿಕೆಗಳಿಗೂ ಇದೇ ರೀತಿ ಸಹಕಾರ ನೀಡುವಂತೆ ಕೋರಿದರು.
ಪ್ರತಿಭಾ ಪುರಸ್ಕಾರ
ಇದೇ ಸಂದರ್ಭದಲ್ಲಿ ಹತ್ತನೇ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜದ ಉಪಾಧ್ಯಕ್ಷ ಕೊಟ್ಟಕೇರಿಯನ ಪ್ರದೀಪ್, ಮಾಜಿ ಅಧ್ಯಕ್ಷ ತೂಟೇರ ವೆಂಕಟರಮಣ, ಹಿರಿಯರಾದ ಚೌಕಿಮನೆ ರಘು ತಿಮ್ಮಯ್ಯ, ಮಕ್ಕಂದೂರು ಗ್ರಾ.ಪಂ. ಮಾಜಿ ಸದಸ್ಯ ಕಟ್ಟೆಮನೆ ಗಣೇಶ್, ಕೆಂಜನ ಬಸಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕಿ ಕುಂಬಗೌಡನ ಜಲಜಾಕ್ಷಿ ಇದ್ದರು.
ಗೌಡ ಸಮಾಜದ ನಿರ್ದೇಶಕ, ಗ್ರಾ.ಪಂ. ಮಾಜಿ ಸದಸ್ಯ ಅಣ್ಣೆಚ್ಚಿರ ಸತೀಶ್ ಸ್ವಾಗತಿಸಿದರೆ, ಸಮಾಜದ ಕಾರ್ಯದರ್ಶಿ ಚೀಯಂಡಿ ಸುಜಯ್ ವರದಿ ವಾಚಿಸಿದರು. ಖಜಾಂಚಿ ಗುಡ್ಡೆಮನೆ ಯೋಗಾನಂದ ಬಹುಮಾನ ವಿತರಣಾ ಕಾರ್ಯ ನೆರವೇರಿಸಿಕೊಟ್ಟರು. ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು.