ಸುಂಟಿಕೊಪ್ಪ, ಅ. ೩: ಪ್ರಜಾ ಸೇವಾ ಅಭಿಯಾನದಲ್ಲಿ ಕೇವಲ ಅರ್ಜಿಗಳನ್ನು ಮಾತ್ರ ತೆಗೆದುಕೊಳ್ಳದೆ ಅರ್ಜಿಗಳಲ್ಲಿರುವ ಸಮಸ್ಯೆ ಮತ್ತು ಬೇಡಿಕೆಗಳಿಗೆ ಕಾಲಮಿತಿಯೊಳಗೆ ಪರಿಹಾರವನ್ನು ಕಲ್ಪಿಸುವುದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಜವಾಬ್ದಾರಿ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಶನಿವಾರದಂದು ಸುಂಟಿಕೊಪ್ಪ ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನದ ಅಂಗವಾಗಿ ಕೊಡಗರಹಳ್ಳಿ ಗ್ರಾಮದ ನೇತಾಜಿ ಸಮುದಾಯ ಭವನದಲ್ಲಿ ಸುಂಟಿಕೊಪ್ಪ ಹೋಬಳಿಗೆ ಸೇರಿದ ೮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಜನರ ಬಳಿಗೆ ಸರಕಾರ ಹೋಗಬೇಕೆಂಬುದನ್ನು ಅವರು ಸಾಕಾರಗೊಳಿಸಿದ್ದು, ಇಂದಿನ ಸಭೆಯಲ್ಲಿ ೭೦ ಕ್ಕೂ ಅಧಿಕ ಅರ್ಜಿಗಳು ಬಂದಿದ್ದು ಕಂದಾಯ ಇಲಾಖೆ, ಅರಣ್ಯ ಇಲಾಖೆ, ರಸ್ತೆ ಸಮಸ್ಯೆ, ಶಿಕ್ಷಣ, ಆರೋಗ್ಯ, ಸೂರು ಸೇರಿದಂತೆ ಹಲವು ಸಮಸ್ಯೆ, ಬೇಡಿಕೆಗಳ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲವನ್ನೂ ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದು. ಜೊತೆಗೆ ಜಿಲ್ಲೆಯ ೫ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಕುಡಿಯುವ ನೀರಿನ ಪೂರೈಕೆ ಕುರಿತು ತಹಶೀಲ್ದಾರ್ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಪಡೆ ತಂಡವನ್ನು ರಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್‌ಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲಿಯೂ ಕೂಡ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕೊಳವೆ ಬಾವಿ ಅಥವಾ ಇನ್ಯಾವುದೋ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.

ಸಾಕಷ್ಟು ಮಂದಿ ವಯೋವೃದ್ಧರು, ನಾಗರಿಕರು ತಮ್ಮ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಅಳಲನ್ನು ತೋಡಿಕೊಂಡರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ತಾಲೂಕು ಪ್ರಭಾರ ತಹಶೀಲ್ದಾರ್ ಕೃಷ್ಣಮೂರ್ತಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೆ.ಪಿ. ಅಪ್ಪಣ್ಣ, ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಆರ್‌ಎಫ್‌ಓ ರಕ್ಷಿತ್, ತಾಲೂಕು ಮಟ್ಟದ ಅಧಿಕಾರಿಗಳು, ೧೬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ಆರೋಗ್ಯ ಇಲಾಖೆಯ ವತಿಯಿಂದ ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣ ಪರೀಕ್ಷಿಸುವ ಶಿಬಿರವನ್ನು ಅಯೋಜಿಸಲಾಯಿತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಪ್ರಾರ್ಥಿಸಿ, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್ ಸ್ವಾಗತಿಸಿ, ರವೀಶ್ ವಂದಿಸಿದರು.