ವೀರಾಜಪೇಟೆ, ಅ. ೩: ನಗರದ ಕೊಡವ ಸಮಾಜದ ರಸ್ತೆಗೆ ಹಿರಿಯ ಧುರೀಣ ದೇಶತಕ್ಕ ಮಾತಂಡ ಮೊಣ್ಣಪ್ಪ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ವೀರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ನೂತನ ನಾಮಫಲಕವನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು,”ಮಾತಂಡ ಮೊಣ್ಣಪ್ಪ ಅವರು ಕೊಡಗಿನ ಹೆಮ್ಮೆ ಹಾಗೂ ಸ್ವಾಭಿಮಾನದ ಪ್ರತೀಕ. ಸಮಾಜಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಇಂದಿನ ಯುವ ಜನತೆ ಮರೆಯಬಾರದು. ಇಂತಹ ಮಹನೀಯರ ಸ್ಮರಣೆ ಮತ್ತು ಅವರ ಹೆಸರುಗಳನ್ನು ಸಾರ್ವಜನಿಕ ಸ್ಥಳಗಳಿಗೆ ಇಡುವುದರಿಂದ ಮುಂದಿನ ಪೀಳಿಗೆಗೆ ಅವರ ಆದರ್ಶಗಳು ದಾರಿದೀಪವಾಗುತ್ತವೆ,”ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ”ಕೊಡಗಿನ ಸಂಸ್ಕöÈತಿ, ಪರಂಪರೆ ಮತ್ತು ಹಕ್ಕುಗಳ ರಕ್ಷಣೆಯಲ್ಲಿ ಮಾತಂಡ ಮೊಣ್ಣಪ್ಪ ಅವರ ಕೊಡುಗೆ ಅಪಾರ. ಇಂದಿನ ಯುವ ಪೀಳಿಗೆಯು ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮತ್ತು ಹೋರಾಟದ ಹಾದಿಯನ್ನು ಅರಿಯುವುದು ಅತ್ಯಗತ್ಯ. ಕೊಡವ ಸಮಾಜದ ರಸ್ತೆಗೆ ಅವರ ಹೆಸರಿಡುವ ಮೂಲಕ ಅವರಿಗೆ ತಕ್ಕ ಗೌರವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ, “ಕೊಡವ ಸಮಾಜದ ರಸ್ತೆಗೆ ದೇಶತಕ್ಕ ಮಾತಂಡ ಮೊಣ್ಣಪ್ಪ ಅವರ ಹೆಸರಿಟ್ಟಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ.
ಸಮಾಜವನ್ನು ಒಗ್ಗೂಡಿಸುವಲ್ಲಿ ಮತ್ತು ಸಮಾಜಮುಖಿ ಚಿಂತನೆಗಳನ್ನು ಬಿತ್ತುವಲ್ಲಿ ಅವರ ನಾಯಕತ್ವ ಗುಣಗಳು ಸದಾ ಸ್ಮರಣೀಯ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣ್ಣಿಚಂಡ ರವಿ ಉತ್ತಪ್ಪ, ಹಾಗೂ ಪ್ರಮುಖರಾದ ಕೋಡಿರ ವಿನೋದ್ ನಾಣಯ್ಯ, ಪ್ರಕಾಶ್ ಸೇರಿದಂತೆ ಕೊಡವ ಸಮಾಜದ ಪದಾಧಿಕಾರಿಗಳು, ಮಾತಂಡ ಕುಟುಂಬಸ್ಥರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.