ಸೋಮವಾರಪೇಟೆ, ಅ. ೨: ಸೂರ್ಲಬ್ಬಿ ವ್ಯಾಪ್ತಿಯಲ್ಲಿ ದಪ್ಪ ಕಾಳಿನ ಕರಿಮೆಣಸು ಬೆಳೆ ಇದೀಗ ಸುದ್ದಿಯಾಗುತ್ತಿದ್ದು ಗಮನ ಸೆಳೆದಿದೆ. ತಾಲೂಕಿನ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಣಸಿಗುವ ದಪ್ಪ ಕಾಳಿನ ಕರಿಮೆಣಸು ಬೆಳೆಗೆ ಸೂರ್ಲಬ್ಬಿ ಲೋಕಲ್ ಎಂದು ಹೆಸರಿಟ್ಟು, ಈ ಬೆಳೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಯಾದ ಗಪ್ಪು ಸೋಮಯ್ಯ ಮನವಿ ಮಾಡಿದ್ದಾರೆ.

ಇದು ಅಪರೂಪದ ದೇಸಿ ಒಳ್ಳೆ ಮೆಣಸಿನ ತಳಿಯಾಗಿದ್ದು, ರೈತರಿಗೆ ಹೊಸ ಭರವಸೆ ಮೂಡಿಸಿದೆ. ಸೂರ್ಲಬ್ಬಿಯ ಕಾಫಿ ತೋಟ ಮತ್ತು ಕಾಡಿನಂಚಿನಲ್ಲಿ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಇಲ್ಲದೆ, ನೈಸರ್ಗಿಕವಾಗಿ ಸಮೃದ್ಧವಾಗಿ ಬೆಳೆಯುತ್ತಿರುವ ಅಪರೂಪದ ಸ್ಥಳೀಯ ಒಳ್ಳೆ ಮೆಣಸಿನ ತಳಿ ಇದಾಗಿದ್ದು, ಈ ತಳಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕ್ರಮ ವಹಿಸಬೇಕೆಂದು ಅವರು ಹೇಳಿದ್ದಾರೆ.

ಅತೀ ಹೆಚ್ಚು ಮಳೆ ಬೀಳುವ ಈ ಭಾಗದಲ್ಲಿ, ಸ್ಥಳೀಯ ರೈತರ ತೋಟದಲ್ಲಿ ೨-೩ ಮರಗಳಲ್ಲಿ ಹಬ್ಬಿ ನಿಂತಿರುವ ಈ ಬಳ್ಳಿಯು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಉದ್ದವಾದ ಗೊಂಚಲು ಮತ್ತು ದಟ್ಟವಾದ ಕಾಳುಗಳನ್ನು ಉತ್ಪಾದಿಸುತ್ತದೆ. ಸಾಮಾನ್ಯ ತಳಿಗಳಿಗೆ ಹೋಲಿಸಿದರೆ ಇದು ನಮ್ಮ ಕೊಡಗಿನ ಹವಾಮಾನಕ್ಕೆ ಸಂಪೂರ್ಣ ಹೊಂದಿಕೊAಡಿದ್ದು, ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ಈ ತಳಿಯ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಿ, ಅಭಿವೃದ್ಧಿ ಪಡಿಸಿದರೆ ಕೊಡಗಿನ ಕರಿಮೆಣಸು ಬೆಳೆಗಾರರಿಗೆ ವರದಾನವಾಗಲಿದೆ. ಸಾವಯವ ಕೃಷಿಗೆ ಒತ್ತು ನೀಡುತ್ತಿರುವ ಇಂದಿನ ದಿನಗಳಲ್ಲಿ ಇಂತಹ ದೇಸೀ ತಳಿಗಳ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದೆ. ಈ ಕುರಿತು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ (IISಖ) ಮತ್ತು ತೋಟಗಾರಿಕೆ ಇಲಾಖೆ ಗಮನ ಹರಿಸಿ, ಈ ತಳಿಯನ್ನು ‘ಸೂರ್ಲಬ್ಬಿ ಲೋಕಲ್’ ಎಂದು ಗುರುತಿಸಿ, ರೈತರಿಗೆ ವಿಸ್ತರಿಸಬೇಕು ಎಂದು ಮಾಜಿ ಸೈನಿಕರೂ ಆಗಿರುವ ಸ್ಥಳೀಯ ಕೃಷಿಕ ಗಪ್ಪು ಸೋಮಯ್ಯ ಮನವಿ ಮಾಡಿದ್ದಾರೆ.