(ಕಾಯಪAಡ ಶಶಿ ಸೋಮಯ್ಯ)
ಮಡಿಕೇರಿ, ಅ. ೨: ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ಸ್ಥಳಗಳಲ್ಲಿ ಒಂದಾದ ಹಾಗೂ ಸ್ಥಳೀಯವಾಗಿ ನಡೆಯುವ ಪಂದ್ಯಾವಳಿಗಳಲ್ಲಿ ಹೆಚ್ಚಿನ ಜನರು ಸೇರುವ ಪೊನ್ನಂಪೇಟೆಯಲ್ಲಿರುವ ಹಾಕಿ ಸಿಂಥೆಟಿಕ್ ಟರ್ಫ್ನ ಬದಲೀಕರಣ ಕಾಮಗಾರಿ ಇದೀಗ ಪ್ರಾರಂಭಗೊAಡಿದೆ.
ಅಲ್ಲಿನ ಕೆಪಿಎಸ್ ಶಾಲಾ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಈ ಟರ್ಫ್ ಮೈದಾನ ಬರಲಿದೆ. ಈ ಹಿಂದೆ ೨೦೧೪ರ ಸಂದರ್ಭದಲ್ಲಿ ಪೊನ್ನಂಪೇಟೆಯ ಈ ಮೈದಾನದಲ್ಲಿ ಸಿಂಥೆಟಿಕ್ ಟರ್ಫ್ ಅನ್ನು ಅಳವಡಿಸಲಾಗಿತ್ತು. ಈ ಟರ್ಫ್ ಅಳವಡಿಕೆಯ ಬಳಿಕ ಹಲವಷ್ಟು ಹಾಕಿ ಪಂದ್ಯಾವಳಿಗಳು, ಜಿಲ್ಲಾ ಹಾಕಿ ಲೀಗ್, ಶಾಲಾ - ಕಾಲೇಜು ಮಟ್ಟದ ಪಂದ್ಯಾವಳಿಗಳು, ಇನ್ನಿತರ ಕ್ಲಬ್ ಮಟ್ಟದ ಪಂದ್ಯಾವಳಿಗಳು ಈ ಮೈದಾನದಲ್ಲಿ ಜರುಗಿವೆ. ೨೦೧೪ ರಲ್ಲಿ ಟರ್ಫ್ ಅಳವಡಿಸಲಾಗಿದ್ದು, ಇದು ಪ್ರಸ್ತುತ ದುರಸ್ತಿಗೀಡಾಗಿತ್ತು.
ಅಲ್ಲದೆ, ಮೈದಾನವೂ ಕೆಲವೆಡೆ ನೀರು ನಿಲ್ಲುವಂತಾಗಿ ಸಮಸ್ಯೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಈ ಬಗ್ಗೆ ಆಸಕ್ತಿ ತೋರಿ ಮೈದಾನದ ದುರಸ್ತೀಕರಣಕ್ಕೆ ಸಹಕಾರ ನೀಡಿದ್ದಾರೆ. ಆರಂಭದಲ್ಲಿ ಹಾಳಾಗಿದ್ದ ಟರ್ಫ್ ಅನ್ನು ಸರಿಪಡಿಸುವ ಉದ್ದೇಶವಿತ್ತಾದರೂ ಇದು ಮತ್ತೆ ಅಸಮರ್ಪಕವಾಗುವ ಹಿನ್ನೆಲೆಯಲ್ಲಿ ಹೊಸ ಟರ್ಫ್ ಅನ್ನೇ ಅಳವಡಿಸಲು ಶಾಸಕರು ಉತ್ಸುಕತೆ ತೋರಿದ್ದರು. ಇದರಂತೆ ಇದೀಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಹೊಸ ಟರ್ಫ್ ಅಳವಡಿಕೆಗೆ ಯೋಜನೆ ರೂಪಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ರೂ. ೨.೫೮ ಕೋಟಿ
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬೆಂಗಳೂರಿನ ಮೆ|| ಟರ್ಟಲ್ ಎಂಟರ್‌ಪ್ರೆöÊಸಸ್‌ನ ಸರಿತಾ ವಿಶ್ವನಾಥ್ ಶಾಸ್ತಿç ಅವರು ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ. ಒಟ್ಟು ರೂ. ೩.೦೫ ಕೋಟಿಯ ಯೋಜನೆ ಇದಾಗಿದ್ದು, ಜಿಎಸ್‌ಟಿ ಒಳಗೊಂಡು ರೂ. ೨,೫೮,೭೩,೭೨೯ ರೂ.ಗಳನ್ನು ಹೊಸ ಟರ್ಫ್ ಅಳವಡಿಕೆಗಾಗಿ ಬಳಸಲಾಗುತ್ತಿದೆ. ಈ ಹಿಂದೆ ಟರ್ಫ್ ಅಳವಡಿಸಿದ ನಂತರ ಈಗಾಗಲೇ ೧೨ ವರ್ಷ ಪೂರ್ಣಗೊಂಡಿದೆ. ಒಂದು ಟರ್ಫ್ನ ಅವಧಿ ಆಟದ ಬಳಕೆಯ ಅನುಗುಣವಾಗಿ ಸುಮಾರು ೭ ರಿಂದ ೮ ವರ್ಷಗಳಷ್ಟೆ ಬಾಳುತ್ತದೆ. ಹಿಂದಿನ ಟರ್ಫ್ ಪ್ರಸ್ತುತ ಬಹುತೇಕ ದುರಸ್ತಿಗೀಡಾಗಿತ್ತು.
ಬ್ಲೂ ಕಲರ್ ಟರ್ಫ್
ಈ ಹಿಂದೆ ಇಲ್ಲಿ ಹಸಿರು ಬಣ್ಣದ ಕೃತಕ ಹುಲ್ಲು ಹಾಸಿನ (ಸಿಂಥೆಟಿಕ್ ಟರ್ಫ್) ಟರ್ಫ್ ಅಳವಡಿಸಲಾಗಿತ್ತು. ಇದೀಗ ಹೊಸದಾಗಿ ಅಳವಡಿಸಲ್ಪಡುವ ಟರ್ಫ್ ನೀಲಿ ಬಣ್ಣದಾಗಿರುತ್ತದೆ. ಈ ಟರ್ಫ್ ಅನ್ನು ನೆದರ್‌ಲ್ಯಾಂಡ್‌ನಿAದ ಇಲ್ಲಿಗೆ ತರಬೇಕಾಗಿದೆ.
ಇದೀಗ ಕಳೆದೆರಡು ದಿನಗಳ ಹಿಂದಿನಿAದ ಬದಲೀಕರಣ ಕಾಮಗಾರಿ ಆರಂಭಗಿಸಲಾಗಿದೆ. ಪ್ರಸ್ತುತ ಇರುವ ಮ್ಯಾಟ್ - ಟರ್ಫ್ ಅನ್ನು ತೆರವು ಮಾಡುವ ಕೆಲಸ ಸಾಗುತ್ತಿದೆ. ಕಳೆದ ಜೂನ್‌ನಲ್ಲಿ ಈ ಕಾಮಗಾರಿಗೆ ಅನುಮೋದನೆಯಾಗಿದ್ದು, ಒಟ್ಟು ೧೧ ತಿಂಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ಆದರೂ ಮುಂದಿನ ಮಾರ್ಚ್ ವೇಳೆಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಹೊಸ ಟರ್ಫ್ ಅಳವಡಿಕೆಯೊಂದಿಗೆ ಮೈದಾನವನ್ನು ಮತ್ತೊಮ್ಮೆ ಸಮತಟ್ಟುಗೊಳಿಸುವುದು, ಸುತ್ತಲೂ ಇರುವ ಗ್ರಿಲ್‌ಗಳನ್ನು ಬದಲಾಯಿಸುವ ಕೆಲಸವನ್ನೂ ನಿರ್ವಹಿಸಲಾಗುತ್ತದೆ.
ಈ ಬಗ್ಗೆ “ಶಕ್ತಿ’’ಯೊಂದಿಗೆ ಪ್ರತಿಕ್ರಿಯಿಸಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಅವರು ಮುಂದಿನ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವೂ ಈ ಬಾರಿ ಪೊನ್ನಂಪೇಟೆಯಲ್ಲಿ ನಡೆಯಲಿದೆ. ಈ ವೇಳೆಗೆ ಹೊಸ ಮೈದಾನ ಸಿದ್ಧಗೊಳ್ಳಲಿದೆ ಎಂದಿದ್ದಾರೆ.