ಸೋಮವಾರಪೇಟೆ, ಅ. ೨: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ೫೦ನೇ ವರ್ಷದ ಅದ್ದೂರಿ ಆಯುಧ ಪೂಜಾ ಕಾರ್ಯಕ್ರಮ ತಾ .೧೯ ಮತ್ತು ೨೦ ರಂದು ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.೪ರಂದು ಸಂಘದ ಸದಸ್ಯರುಗಳಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಆಯುಧ ಪೂಜಾ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಏಳನೇ, ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಸಂಘದ ಕಚೇರಿಗೆ ತಲುಪಿಸಬೇಕು ಎಂದು ಬಾಲಕೃಷ್ಣ ಪೂಜಾರಿ ತಿಳಿಸಿದರು.
ತಾ. ೨೦ರಂದು ಪೂರ್ವಾಹ್ನ ೧೧ಗಂಟೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುವ ಭವ್ಯ ವೇದಿಕೆಯಲ್ಲಿ ಸಾರ್ವಜನಿಕರ ವಿಭಾಗದಲ್ಲಿ ಮುಕ್ತ ಡ್ಯಾನ್ಸ್-ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ ೫೦ ಸಾವಿರ, ದ್ವಿತೀಯ ೩೦ ಹಾಗು ತೃತೀಯ ೨೦ ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ. ಆಸಕ್ತ ತಂಡಗಳು ಅ.೧೭ ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ನೃತ್ಯ ತಂಡದಲ್ಲಿ ೭ಕ್ಕಿಂತ ಹೆಚ್ಚು ನೃತ್ಯಪಟುಗಳು ಇರಬೇಕು. ಹೆಚ್ಚಿನ ಮಾಹಿತಿಗಾಗಿ ೯೮೪೪೪೬೧೧೩೪, ೯೪೪೮೮೯೬೪೯೪ ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಮಣಿ ಕುಶಾಲಪ್ಪ, ಉಪಾಧ್ಯಕ್ಷ ರಂಗಸ್ವಾಮಿ, ಖಜಾಂಚಿ ಡ್ಯಾನಿ, ನಿರ್ದೇಶಕ ಇಸ್ಮಾಯಿಲ್ ಇದ್ದರು.