ಮುಳ್ಳೂರು, ಅ. ೨: ಗೌರಿ ಗಣೇಶ ಹಬ್ಬದ ಪ್ರಯುಕ್ತ ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು.

ಗ್ರಾಮದ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವಾಹನದಲ್ಲಿ ಹೂವಿನಿಂದ ಅಲಂಕರಿಸಿದ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಕೂರಿಸಲಾಯಿತು. ನಂತರ ಗಣೇಶೋತ್ಸವದ ಶೋಭಯಾತ್ರೆಯು ಗ್ರಾಮದ ಮುಖ್ಯ ಬೀದಿಗಳಲ್ಲಿ ಮುಳ್ಳೂರು ಜಂಕ್ಷನ್‌ನಲ್ಲಿರುವ ಅರಳಿಮರ ಕಟ್ಟೆಯ ವರೆಗೂ ವಾದ್ಯಗೋಷ್ಠಿಯೊಂದಿಗೆ ಸಾಗಿತು.

ಮೆರವಣಿಗೆ ಸಂದರ್ಭದಲ್ಲಿ ಭಕ್ತಾದಿಗಳು, ಗ್ರಾಮಸ್ಥರು, ಪುರುಷರು, ಮಹಿಳೆಯರು, ಮಕ್ಕಳು, ಹಿರಿಯರು ಪಾಲ್ಗೊಂಡಿದ್ದರು. ರಾತ್ರಿ ೭ ಗಂಟೆಗೆ ಗ್ರಾಮದ ಗುದ್ದಲಿಗೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಗಣೇಶ ವಿಸರ್ಜನೋತ್ಸವದ ಅಂಗವಾಗಿ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಮಧ್ಯಾಹ್ನ ಮತ್ತು ಸಂಜೆ ಸೇವಾ ಸಮಿತಿ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು.