ಗೋಣಿಕೊಪ್ಪಲು, ಅ. ೨: ಇತಿಹಾಸ ಪ್ರಸಿದ್ದ ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ೪೮ ನೇ ವರ್ಷದ ದಸರಾ ಜನೋತ್ಸವದ ಲಾಂಛನವನ್ನು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಬಿಡುಗಡೆಗೊಳಿಸಿದರು.
ಗೋಣಿಕೊಪ್ಪ ದಸರಾ ಉತ್ಸವದ ಅಂಗವಾಗಿ ನಗರದ ಶಕ್ತಿ ದೇವತೆ, ಉಮಾಮಹೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಸರಾ ಸಮಿತಿಯ ಪದಾಧಿಕಾರಿಗಳು ದಸರಾ ಉತ್ಸವವು ಅತ್ಯಂತ ಯಶಸ್ವಿಯಾಗಿ ಯಾವುದೇ ವಿಘ್ನ ಇಲ್ಲದೆ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಅಲ್ಲದೆ ಹತ್ತು ದಿನಗಳ ಕಾಲ ನಡೆಯುವ ದೇವಿಯ ಪೂಜಾ ಕಾರ್ಯ ನೇರವೇರಿಸಿಕೊಡಲು ಅರ್ಚಕರಿಗೆ ಶಾಸಕ ಪೊನ್ನಣ್ಣ ಆಮಂತ್ರಣ ನೀಡಿದರು.
ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ದೇವಿಯ ಉತ್ಸವವು ಅತ್ಯಂತ ಯಶಸ್ವಿಯಾಗಿ ಜರುಗಲಿ ಎಲ್ಲರೂ ಸೇರಿ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಮೆರುಗು ತರೋಣ, ಸರ್ಕಾರÀ ಗೋಣಿಕೊಪ್ಪ ದಸರಾ ಉತ್ಸವಕ್ಕಾಗಿ ಒಂದು ಕೋಟಿ ಅನುದಾನ ಮಂಜೂರು ಮಾಡಿದೆ. ಬಿಡುಗಡೆಗೊಂಡ ಅನುದಾನ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುವಂತಾಗಲಿ ಎಂದು ಆಶಿಸಿದರು
ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯದರ್ಶಿ ಎನ್.ಎಸ್. ಕಂದಾ ದೇವಯ್ಯ, ದಶ ಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ದಸರಾ ಸಮಿತಿಯ ಪದಾಧಿಕಾರಿಗಳಾದ ದಿಲನ್ ಚಂಗಪ್ಪ, ಮುರುಗ, ಜಮ್ಮಡ ಸೋಮಣ್ಣ, ನಾರಾಯಣ ಸ್ವಾಮಿ ನಾಯ್ಡು, ಬಿ.ಎನ್. ಪ್ರಕಾಶ್, ವಿ.ಟಿ.ವಾಸು, ಸುಶೀಲ, ಚಂದನ್ ಕಾಮತ್, ನೂರೇರ ಧನ್ಯ, ನಾಮೇರ ಅಂಕಿತ್ ಪೊನ್ನಪ್ಪ , ಸಹ ಕಾರ್ಯದರ್ಶಿ ಸಪ್ತೇಶ್ , ಕೊಕ್ಕಂಡ ರೋಶನ್, ಟಿ.ಕೆ. ಖಾಲಿದ್, ರಾಮಕೃಷ್ಣನ್, ರಾಮದಾಸ್ ಸೇರಿದಂತೆ ಪ್ರಮುಖರು ಈ ಸಂದರ್ಭ ಹಾಜರಿದ್ದರು.