ಮಡಿಕೇರಿ, ಅ. ೨: ಮಳೆ, ಬಿಸಿಲು ಸೇರಿದಂತೆ ಪ್ರತಿಕೂಲ ಹವಾಮಾನದಲ್ಲೂ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಮಡಿಕೇರಿ ಮತ್ತು ಕುಶಾಲನಗರ ವ್ಯಾಪ್ತಿಯ ಸುಮಾರು ೮೦ ಮಂದಿ ಸಂಚಾರ ಪೊಲೀಸರಿಗೆ ಸರ್ವಋತು ಜಾಕೆಟ್‌ಗಳನ್ನು ವಿತರಿಸಲಾಯಿತು.

ಮಡಿಕೇರಿ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗರೂ ಕೇರ್ ಆಸ್ಪತ್ರೆ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ಥಾಪಕ ನಿರ್ದೇಶಕ ಡಾ. ಶೇಖರ್ ಸುಬ್ಬಯ್ಯ ಅವರ ನೇತೃತ್ವದಲ್ಲಿ ಜಾಕೆಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊಲೀಸರಿಗೆ ಆರೋಗ್ಯ ತಪಾಸಣೆಯನ್ನೂ ನಡೆಸಲಾಯಿತು.

ಕೊಡಗು ಪೊಲೀಸ್ ಅಧೀಕ್ಷಕಿ ಆರ್.ಎನ್. ಬಿಂದುಮಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸರು ಹಗಲು-ರಾತ್ರಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದು, ಸಂಚಾರ ಪೊಲೀಸರ ಕೆಲಸ ಅತ್ಯಂತ ಸವಾಲಿನದ್ದಾಗಿದೆ ಎಂದರು.

ಸಾರ್ವಜನಿಕರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಅಗತ್ಯ ಮೂಲಸೌಕರ್ಯ ಹಾಗೂ ಪೂರಕ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯ. ಕಾಂಗರೂ ಕೇರ್‌ನಂತಹ ಸಂಸ್ಥೆಗಳು ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಪೊಲೀಸ್ ವಸತಿ ನಿಲಯದ ಅಭಿವೃದ್ಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾಂಗರೂ ಕೇರ್ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ಶೇಖರ್ ಸುಬ್ಬಯ್ಯ ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ ಹಲವು ಜಿಲ್ಲೆಗಳಲ್ಲಿ ಸಂಚಾರ ಪೊಲೀಸರಿಗೆ ಗುಣಮಟ್ಟದ ಸರ್ವಋತು ಜಾಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಸಂಸ್ಥೆಯ ಲಾಭಾಂಶದ ಒಂದು ಭಾಗವನ್ನು ರಸ್ತೆ, ದೇವಸ್ಥಾನ ಅಭಿವೃದ್ಧಿ ಸೇರಿದಂತೆ ಸಮುದಾಯದ ವಿವಿಧ ಉಪಯುಕ್ತ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದರು.

ಮುAದಿನ ದಿನಗಳಲ್ಲಿಯೂ ಪೊಲೀಸರಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.

ಮಡಿಕೇರಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಸೂರಜ್ ಪಿ.ಎ. ಮಾತನಾಡಿ, ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕಿ ಆರ್.ಎನ್. ಬಿಂದುಮಣಿ ಹಾಗೂ ಡಿವೈಎಸ್‌ಪಿ ಸೂರಜ್ ಅವರನ್ನು ಡಾ. ಶೇಖರ್ ಸುಬ್ಬಯ್ಯ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಬಲಿಜ ಸಮಾಜದ ಮುಖಂಡ ಹೇಮಂತ್ ಕುಮಾರ್, ಕೊಡಗು ಬಲಿಜ ಸಮಾಜದ ಮುಖಂಡ ಟಿ.ಎಲ್. ಶ್ರೀನಿವಾಸ್ ಉಪಸ್ಥಿತರಿದ್ದರು. ಕಾಂಗರೂ ಕೇರ್ ಡಿಜಿಟಲ್ ವಿಭಾಗದ ಮುಖ್ಯಸ್ಥೆ ಅಕ್ಷಿತಾ ಕೆ. ಸ್ವಾಗತಿಸಿ, ವಂದಿಸಿದರು.