ಐಗೂರು, ಅ. ೨ : ಮಾದಾಪುರದ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೪೭ನೇ ವರ್ಷದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

೧೩ ದಿನಗಳ ಕಾಲ ದೇವಾಲಯದಲ್ಲಿ ಅರ್ಚಕರಾದ ಪ್ರಕಾಶ್ ಅವರ ನೇತೃತ್ವದಲ್ಲಿ ಪೂಜೆ, ಹೋಮ, ಮತ್ತು ಹವನ ನಡೆದಿತ್ತು. ವಿಸರ್ಜನೆಯ ದಿನದಂದು ವಿದ್ಯುತ್ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶೋಭಾಯಾತ್ರೆ ನಡೆಸಲಾಯಿತು.

ದೇವಾಲಯದಿಂದ ಹೊರಟ ಶೋಭಾಯಾತ್ರೆ ಮಾದಾಪುರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಭಕ್ತರ ಮನೆಗಳ ಮುಂದೆ ಬಂದಾಗ ಭಕ್ತರು ಗಣಪನಿಗೆ ಹಣ್ಣು ಕಾಯಿ ಸಲ್ಲಿಸಿದರು. ಪುರುಷರು, ಮಹಿಳೆಯರು ಮತ್ತು ಮಕ್ಕಳು ಕುಣಿದು ಕುಪ್ಪಳಿಸಿದರು. ಸಿಡಿಮದ್ದುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತು. ಶೋಭಾಯಾತ್ರೆಯು ಕಾರೆಕಾಡ್ ತನಕ ಸಾಗಿ ವಾಪಸ್ಸು ಬಂದು ಮಾದಾಪುರ ಹೊಳೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸೋಮವಾರಪೇಟೆಯ ವೃತ್ತ ನಿರೀಕ್ಷಕರಾದ ಮುದ್ದು ಮಹದೇವ ಅವರ ನೇತೃತ್ವದಲ್ಲಿ ಬಂದೋಬಸ್ತ್ ಕಾರ್ಯ ಏರ್ಪಡಿಸಲಾಗಿತ್ತು. ಉತ್ಸವದಲ್ಲಿ ಮಾದಾಪುರ ವ್ಯಾಪ್ತಿಯ ಕುಂಬೂರು, ಹಟ್ಟಿಹೊಳೆ, ಗರಗಂದೂರು ಗ್ರಾಮಸ್ಥರು ಮತ್ತು ಉತ್ಸವ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.