ಸೋಮವಾರಪೇಟೆ, ಅ. ೧: ಈ ಹಿಂದೆ ಕಂದಾಯ ಗ್ರಾಮವಾಗಿ ಪರಿಗಣಿಸಲ್ಪಟ್ಟು ನಂತರ ರದ್ದುಗೊಂಡಿರುವ ಯಡವನಾಡು ಹಾಗೂ ಅತ್ತೂರು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಯಡವನಾಡು ಹಾಗೂ ಅತ್ತೂರು ಗ್ರಾಮಸ್ಥರ ನಿಯೋಗ ಶಾಸಕ ಡಾ. ಮಂತರ್ ಗೌಡ ಅವರ ಮೂಲಕ ವಿಧಾನ ಸೌಧದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖಾ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಕೃಷಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರುಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಯಿತು.

ಯಡವನಾಡು ಹಾಗೂ ಅತ್ತೂರು ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿ ದಾಖಲಾತಿಗಳ ವಿತರಣೆಗೆ ಕ್ರಮ ಕೈಗೊಂಡಿದ್ದರೂ, ಇತ್ತೀಚೆಗೆ ಈ ಪ್ರಕ್ರಿಯೆಯನ್ನು ರದ್ದುಗೊಳಿಸಿರುವುದರಿಂದ ನೂರಾರು ರೈತರಿಗೆ, ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ, ನ್ಯಾಯಾಲಯದ ಗಮನ ಸೆಳೆದು ಕಂದಾಯ ಗ್ರಾಮ ಮರು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಾ. ಮಂತರ್ ಗೌಡ ಅವರು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ಗಮನ ಸೆಳೆದರು.

ರೈತರ ಪ್ರಮುಖ ಬೇಡಿಕೆಯಾಗಿರುವ ಈ ವಿಚಾರದ ಬಗ್ಗೆ ಆದಷ್ಟು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಂಡು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಲಾಯಿತು. ಶಾಸಕರ ಮನವಿಗೆ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಕ್ರಮದ ಭರವಸೆ ನೀಡಿದರು.

ಈ ಸಂದÀರ್ಭ ಯಡವನಾಡು ಗ್ರಾಮದ ಟಿ.ಕೆ. ರಮೇಶ್, ಮೋಹನ್, ಗಣೇಶ, ಡಿ.ಎಂ. ರಮೇಶ್, ಸುರೇಶ್, ವಕೀಲರಾದ ಪ್ರದೀಪ್, ಲೋಕೇಶ್ ಸೇರಿದಂತೆ ಇತರರು ಇದ್ದರು.