ವರದಿ : ಈಶಾನ್ವಿ
ವೀರಾಜಪೇಟೆ, ಸೆ. ೨೯: ಚಳಿ, ಮಳೆ, ಬಿಸಿಲು, ಗಾಳಿಯನ್ನೂ ಲೆಕ್ಕಿಸದೆ ಸುಮಾರು ೬೫೦ ವರ್ಷಗಳಿಂದ ಪ್ರಕೃತಿಯ ನಡುವೆ ಅಚಲವಾಗಿ ನಿಂತಿರುವ ಪ್ರಾಚೀನ ಶಿವಲಿಂಗ. ಅದರ ಬಾಗುವಿಕೆಗೆ ತಕ್ಕಂತೆ ಬಾಗಿಕೊಂಡು ಕಾವಲು ಕಾಯುತ್ತಿರುವಂತೆ ಭಾಸವಾಗುವ ಬಸವನ ಮೂರ್ತಿ.
ಇವೆಲ್ಲವೂ ವೀರಾಜಪೇಟೆ ಹೊರವಲಯದ ಐಮಂಗಲ ಗ್ರಾಮದ ಕಾಡಿನ ಮಧ್ಯೆ ದಶಕಗಳಿಂದ ಲೋಕಕ್ಕೆ ಅರಿವಿಲ್ಲದೆ ಅನಾಥವಾಗಿ ಬಿದ್ದಿದ್ದವು. ಆದರೆ, ಕಾಲಕ್ರಮೇಣ ಈ ಪವಿತ್ರ ಸ್ಥಳ ನಿರ್ಲಕ್ಷö್ಯಕ್ಕೊಳಗಾಗಿದ್ದರ ಪರಿಣಾಮ, ಆ ರಸ್ತೆಯಲ್ಲಿ ಸಂಚರಿಸುವವರಿಗೆ ನಿತ್ಯದ ಭಯಾನಕ ಅನುಭವಗಳು ಎದುರಾಗಿದ್ದವು; ಗ್ರಾಮದಲ್ಲಿ ನೆಮ್ಮದಿ ಕಡೆಗಣಿಸಲ್ಪಟ್ಟು ಅಭಿವೃದ್ಧಿಯೂ ಕುಂಠಿತಗೊAಡಿತ್ತು!
ಹೌದು, ಇದು ಕೇವಲ ಕಲ್ಪನೆಯ ಕಥೆಯಲ್ಲ, ಕೊಡಗಿನ ವೀರಾಜಪೇಟೆ ಸಮೀಪದ ಐಮಂಗಲದಿAದ ಚೆಂಬೆಬೆಳ್ಳೂರು ರಸ್ತೆಯ ಮೂರು ಕಿ.ಮೀ. ದೂರದಲ್ಲಿರುವ ಒಂದು ಐತಿಹಾಸಿಕ ಮತ್ತು ದೈವಿಕ ರಹಸ್ಯ. ದಶಕಗಳ ಕಾಲ ನಿರ್ಲಕ್ಷ÷್ಯಕ್ಕೆ ಒಳಗಾಗಿ ಕಾಡುಪಾಲಾಗಿದ್ದ ಈ ಪ್ರಾಚೀನ ಮಹದೇವ ದೇವಸ್ಥಾನದ ಕಥೆ ಈಗ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
ಅರ್ಚಕರ ವಂಶಸ್ಥರ ಮೌನ ಹಾಗೂ ಕಾಡುಪಾಲಾದ ದೇಗುಲ
ತಲಾಂತರದಿAದ ಈ ದೇವಾಲಯದಲ್ಲಿ ನಿತ್ಯಪೂಜೆ ಸಲ್ಲಿಸುತ್ತಿದ್ದ ಬ್ರಾಹ್ಮಣ ಕುಟುಂಬದ ಅರ್ಚಕರಿಗೆ ಹೆಣ್ಣುಮಕ್ಕಳು ಜನಿಸಿ, ಅವರು ಮದುವೆಯಾಗಿ ಹೊರಜಿಲ್ಲೆಗಳಲ್ಲಿ ನೆಲೆಸಿದ ಬಳಿಕ ಪರಿಸ್ಥಿತಿ ಬದಲಾಯಿತು. ಇದ್ದ ಹಿರಿಯ ಅರ್ಚಕರು ತಾವು ಬದುಕಿರುವವರೆಗೆ ಪೂಜೆ ಸಲ್ಲಿಸಿ ನಿಧನರಾದರು. ಆ ಬಳಿಕ ಕುಟುಂಬದಿAದ ಯಾರೂ ಬಾರದ ಕಾರಣ ಮತ್ತು ಗ್ರಾಮಸ್ಥರ ನಿರ್ಲಕ್ಷ÷್ಯದಿಂದ ಈ ದೇವಸ್ಥಾನ ಸಂಪೂರ್ಣವಾಗಿ ಕಾಡುಪಾಲಾಯಿತು. ವಿಶೇಷವೆಂದರೆ, ದೇವಾಲಯದ ಇಡೀ ರಚನೆ ಶಿಥಿಲಗೊಂಡಿದ್ದರೂ, ಗರ್ಭಗುಡಿಯಲ್ಲಿದ್ದ ಶಿವಲಿಂಗ ಮಾತ್ರ ಯಾವುದೇ ಹಾನಿಗೊಳಗಾಗದೆ ಅಖಂಡವಾಗಿ ಉಳಿದಿರುವುದು ದೈವಿಕ ಚಮತ್ಕಾರವೇ ಸರಿ.
ತಾಂಬೂಲ ಪ್ರಶ್ನೆ
ದಿನದಿಂದ ದಿನಕ್ಕೆ ಗ್ರಾಮದಲ್ಲಿ ಹೆಚ್ಚುತ್ತಿದ್ದ ವಿಚಿತ್ರ ಸಮಸ್ಯೆಗಳು ಹಾಗೂ ಹಿಂಸೆಯಿAದ ಕಂಗೆಟ್ಟ ಹತ್ತನೇ ತಲೆಮಾರಿನ ಸ್ಥಳೀಯ ನಿವಾಸಿ ಬೊಳ್ಳಚಂಡ ಅಶ್ವನ್ ಮೇದಪ್ಪ ಹಾಗೂ ಗ್ರಾಮದ ಪ್ರಮುಖರು ಈ ಬಗ್ಗೆ ಗಂಭೀರವಾಗಿ ಚಿಂತಿಸಿದರು. ಗ್ರಾಮಸ್ಥರ ಸಭೆ ನಡೆಸಿ, ಕೇರಳದ ತಂತ್ರಿಗಳ ಮೊರೆ ಹೋಗಲಾಯಿತು. ತಂತ್ರಿಗಳು ನಡೆಸಿದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ‘ತಾಂಬೂಲ ಪ್ರಶ್ನೆ'ಯಲ್ಲಿ ಇಲ್ಲಿ ಪ್ರಾಚೀನ ಮಹದೇವ ದೇವಸ್ಥಾನವಿರುವುದು ಮತ್ತು ನಿತ್ಯಪೂಜೆ ನಿಂತಿದ್ದರಿAದಲೇ ಗ್ರಾಮದಲ್ಲಿ ಅಶಾಂತಿ ನೆಲೆಸಿರುವುದು ಬೆಳಕಿಗೆ ಬಂದಿತು.
ಎರಡು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ
ತಂತ್ರಿಗಳ ಮಾರ್ಗದರ್ಶನದಂತೆ, ಪ್ರಸ್ತುತ ಇರುವ ಜಾಗದಿಂದ ಶಿವಲಿಂಗವನ್ನು ಆಗ್ನೇಯ ದಿಕ್ಕಿಗೆ ಸ್ಥಳಾಂತರಿಸಿ, ವಿಗ್ರಹ ಮರುಸ್ಥಾಪನೆ ಹಾಗೂ ವಿವಿಧ ಹೋಮ-ಹವನಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ಛಿದ್ರಗೊಂಡಿರುವ ಶಿವಲಿಂಗದ ಪೀಠ, ತೀರ್ಥ ಕುಂಡ, ಕಲ್ಯಾಣಿ, ಹಸ್ತ ಕಂಬಗಳು, ವಿಗ್ರಹಗಳ ಪುನರ್ನಿರ್ಮಾಣ, ಪೌಳಿ ಹಾಗೂ ಅರ್ಚಕರ ಗೃಹ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅಂದಾಜು ೨ ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಯನ್ನು ಸರಕಾರದ ಅನುದಾನಕ್ಕಾಗಲಿ ಅಥವಾ ಯಾರೋ ಒಬ್ಬರ ಮೇಲೂ ಕಾಯದೆ, ಗ್ರಾಮಸ್ಥರ ಸರ್ವ ಸದಸ್ಯರ ಸಹಕಾರ ಹಾಗೂ ಸಾರ್ವಜನಿಕ ದೇಣಿಗೆಯ ಮೂಲಕವೇ ಪೂರ್ಣಗೊಳಿಸಲು ಮಹದೇವ ದೇವಾಲಯ ಟ್ರಸ್ಟ್ ನಿರ್ಧರಿಸಿದೆ ಎಂದು ಟ್ರಸ್ಟ್ನ ಉಪಾಧ್ಯಕ್ಷ ಹಾಗೂ ವಕೀಲರಾದ ಬೊಳ್ಳಚಂಡ ಶ್ಯಾಮ್ ಸೋಮಣ್ಣ ಹೇಳುತ್ತಾರೆ.
ಜಾತಿ-ಮತದ ಹಂಗಿಲ್ಲದ ದೈವಿಕ ಸೇವೆ
"ಈ ದೇವಾಲಯಕ್ಕೆ ಎಲ್ಲಾ ಜನಾಂಗದವರೂ ಆಗಮಿಸಿ ಪೂಜೆ ಸಲ್ಲಿಸಬಹುದು. ಇಲ್ಲಿ ಯಾವುದೇ ಜಾತಿ, ಭಾಷೆಯ ತಾರತಮ್ಯವಿರುವುದಿಲ್ಲ" ಎಂಬ ತಂತ್ರಿಗಳ ಅಭಯದಂತೆ, ಗ್ರಾಮದಲ್ಲಿ ಪ್ರಥಮ ಹಂತದ ಹೋಮ-ಹವನಗಳು ವಿಧ್ಯುಕ್ತವಾಗಿ ನೆರವೇರಿದವು. ಈ ಸಂದರ್ಭದಲ್ಲಿ ಭಕ್ತರು ಮುಷ್ಟಿ ಹಣ ಹಾಗೂ ದೀಪದ ಎಣ್ಣೆ ಸಮರ್ಪಿಸಿ, ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಕೈಜೋಡಿಸುವುದಾಗಿ ಪ್ರತಿಜ್ಞೆಗೈದಿದ್ದಾರೆ.
ಬೊಳ್ಳಚಂಡ ಪ್ರಕಾಶ್, ಮೇಕತಂಡ ಚೆಂಗಪ್ಪ, ಗಣಪತಿ, ಸುನಿಲ್, ಪೂಣಚ್ಚ, ರಘು, ರವಿ, ಅರುಣ್, ಕೊಟ್ಟಿಯಂಡ ಪ್ರಶಾಂತ, ಪೊನ್ನಣ್ಣ, ಮನು ಹಾಗೂ ಪೊಯ್ಯೆಟಿರ ದಮಯಂತ, ಕುಂಡ್ರAಡ ಸುನಿಲ್ ಬೆಳ್ಳಿಯಪ್ಪ, ಪೂವಿ, ಕಸ್ತೂರಿ, ಸ್ವಪ್ನ, ಗೀತಾ ಸೇರಿದಂತೆ ಗ್ರಾಮದ ಹಿರಿಯರು, ಮಹಿಳಾ ಮಣಿಗಳು ಮತ್ತು ನೂರಾರು ಭಕ್ತರು ಈ ಐತಿಹಾಸಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮರೆತುಹೋಗಿದ್ದ ಐತಿಹಾಸಿಕ ದೈವಿಕ ಚೈತನ್ಯವೊಂದು ಈಗ ಗ್ರಾಮಸ್ಥರ ಒಗ್ಗಟ್ಟಿನಿಂದ ಮತ್ತೆ ಜಾಗೃತಗೊಳ್ಳುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.