ಜಪಾನ್, ಸೆ. ೨೯: ಜಪಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊಡಗಿನವರಾದ ಮಾಚೆಟ್ಟಿರ ಪೂವಮ್ಮ ಅವರು ಚಿನ್ನದ ಪದಕ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿದ್ದ ಮಿಕ್ಸ್÷್ಡ ರಿಲೇಯಲ್ಲಿ ಬೆಳ್ಳಿ ಪಡೆದಿದ್ದ ಪೂವಮ್ಮ ಇದೀಗ ಮಹಿಳೆಯರ ೪*೪೦೦ ಮೀಟರ್ ರಿಲೇಯಲ್ಲಿ ಅವರನ್ನು ಒಳಗೊಂಡ ಭಾರತ ತಂಡ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕದ ಸಾಧನೆ ಮಾಡಿದೆ.

೩ ನಿಮಿಷ ೨೯ ಸೆಕೆಂಡ್ ೬೯ ಮಿಲಿಸೆಕೆಂಡ್‌ನಲ್ಲಿ ರಿಲೇ ಪೂರೈಸಿ ಭಾರತ ಮೊದಲ ಸ್ಥಾನಗಳಿಸಿದೆ. ೨ನೇ ಸ್ಥಾನವನ್ನು ಬಹ್ರೇನ್ ಹಾಗೂ ೩ನೇ ಸ್ಥಾನವನ್ನು ಚೀನಾ ಪಡೆದುಕೊಂಡಿದೆ.

ಇಂದು ನಡೆದ ರಿಲೇಯಲ್ಲಿ ಭಾರತ ಮಹಿಳೆಯರ ತಂಡದ ಕಿರಣ್ ಅವರು ಓಟ ಪ್ರಾರಂಭಿಸಿದ್ದು, ಪೂವಮ್ಮ ಅವರಿಗೆ ರಿಲೇ ಬ್ಯಾಟನ್ ಹಸ್ತಾಂತರಿಸುವಾಗ ತಂಡ ೩ನೆ ಸ್ಥಾನದಲ್ಲಿತ್ತು. ಪೂವಮ್ಮ ಅವರು ವೇಗವಾಗಿ ಕ್ರಮಿಸಿ ಮೊದಲ ಸ್ಥಾನವನ್ನು ಪಡೆದು ತಂಡದ ಪ್ರಾಚಿ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು. ನಂತರ ವಿತ್ಯಾ ಅವರು ರಿಲೇ ಪೂರೈಸುವಾಗಲೂ ಮೊದಲನೇ ಸ್ಥಾನವನ್ನೇ ಕಾಯ್ದಿರಿಸಿಕೊಳ್ಳುವ ಮೂಲಕ ಭಾರತಕ್ಕೆ ಚಿನ್ನ ಲಭಿಸಿತು. ಏಷ್ಯನ್ ಗೇಮ್ಸ್ ನಲ್ಲಿ ಪೂವಮ್ಮ ಅವರು ೨೦೧೪ರ ಮಹಿಳೆಯರ ರಿಲೇಯಲ್ಲಿ ಹಾಗೂ ೨೦೧೮ರ ಮಹಿಳೆಯರ ಹಾಗೂ ಮಿಕ್ಸ್÷್ಡ ರಿಲೇಯಲ್ಲಿ ಚಿನ್ನ ಪಡೆದಿದ್ದರು. ೨೦೧೪ ರ ೪೦೦ ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದಿದ್ದರು. ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಒಂದು ಬೆಳ್ಳಿ ಹಾಗೂ ಇದೀಗ ಚಿನ್ನ ಪಡೆದಿದ್ದು, ಏಷ್ಯನ್ ಗೇಮ್ಸ್ನಲ್ಲಿನ ೬ನೇ ಪದಕವಾಗಿದೆ.