ಶನಿವಾರಸಂತೆ, ಸೆ. ೨೯: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ಹುಲುಸೆ ಕೆರೆ ಬರದ ನಡುವೆಯೂ ಮೈದುಂಬಿ ನಿಂತಿದ್ದು ಗ್ರಾಮದ ರೈತರಿಗೆ ಕೃಷಿ ಕೆಲಸಕ್ಕೆ ನೀರೊದಗಿಸುತ್ತಿದೆ.

ಪ್ರಸ್ತುತ ವರ್ಷ ಮುಂಗಾರು ಮಳೆ ನಿಗಧಿತ ಸಮಯಕ್ಕೆ ವಾಡಿಕೆಯಂತೆ ಸುರಿಯದೇ ವರ್ಷಾರಂಭದಿAದ ಈವರೆಗೆ ಕೇವಲ ೩೦ ಇಂಚು ಮಳೆಯಾಗಿದೆ. ಬರದ ಛಾಯೆ ಎಲ್ಲೆಡೆ ಆವರಿಸಿರುವಾಗ ಹುಲುಸೆ ಕೆರೆ ತುಂಬಿದ್ದು ರೈತರ ನೆರವಿಗೆ, ಪ್ರಾಣಿಪಕ್ಷಿಗಳಿಗೆ, ದನಕರುಗಳಿಗೆ ಜೀವನಾಡಿಯಾಗಿ ನೀರುಣಿಸುತ್ತಿದೆ.

೨೦೨೫ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಂಡ್ಲಿ ಗ್ರಾಮ ಪಂಚಾಯಿತಿಯ ಪ್ರಗತಿಬಂಧು, ಕೊಡ್ಲಿಪೇಟೆ-ಶನಿವಾರಸಂತೆ ಸ್ವಸಹಾಯ ಸಂಘಗಳ ಒಕ್ಕೂಟಗಳು ಹಾಗೂ ಹುಲುಸೆ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿಯಲ್ಲಿ ಹುಲುಸೆ ಕೆರೆಯ ಪುನಶ್ಚೇತನ ಕಾರ್ಯದ ಕಾಮಗಾರಿ ಆರಂಭವಾಗಿತ್ತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರೂ. ೨.೮೪ ಲಕ್ಷ ಹಾಗೂ ಗ್ರಾಮಸ್ಥರ ಪಾಲು (ಹೂಳು ಸಾಗಾಟ ಮೌಲ್ಯ) ರೂ. ೧.೩೪ ಲಕ್ಷದಲ್ಲಿ ಕಾಮಗಾರಿಯ ಒಟ್ಟು ವೆಚ್ಚ ರೂ. ೪.೧೮ ಲಕ್ಷದಲ್ಲಿ ನಡೆದು, ೨೦೨೬ರ ಫೆ.೧೮ ರಂದು ಹಂಡ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಕೊಡಲಾಗಿತ್ತು. ಗ್ರಾಮಸ್ಥರು ಕೆರೆಯ ನಿರ್ವಹಣೆ ಕಾರ್ಯವನ್ನು ಉತ್ತಮವಾಗಿ ಮಾಡಿಕೊಂಡು ಬರುತ್ತಿರುವುದರಿಂದ ನಿರಂತರ ಜಲಸಮೃದ್ಧಿಯಾಗಿದೆ.

ಪುನಶ್ಚೇತನಗೊಂಡ ಕೆರೆ ಇಂದು ಗ್ರಾಮದಲ್ಲಿ ೮೦ ಎಕರೆಗೂ ಹೆಚ್ಚು ಭತ್ತದ ಬೆಳೆಗೆ ನೀರಾವರಿ ಅನುಕೂಲ ಒದಗಿಸುತ್ತಿದೆ. ೩೦ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಅಂತರ್ಜಲ ಮಟ್ಟ ಕುಸಿಯದಂತೆ ಹುಲುಸೆ ಕೆರೆ ಅನುಕೂಲಕರವಾಗಿದೆ.

ಕೆರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕನಸಿದ್ದು ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಬರದಿಂದ ಎಲ್ಲೆಡೆ ಕೊಳವೆ ಬಾವಿಗಳು ಬತ್ತಿ ಹೋಗುವ ಮುಂಚೆ ಕೆರೆಗಳನ್ನು ಗುರುತಿಸಿ, ಹೂಳು ತೆಗೆಸಿ ಪುನಶ್ಚೇತನಗೊಳಿಸುವ ಪುಣ್ಯಕಾರ್ಯ ಸರ್ಕಾರದಿಂದ ನಡೆಯಬೇಕು ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್ ಹುಲುಸೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.