ಮಡಿಕೇರಿ, ಸೆ. ೨೯: ಮಡಿಕೇರಿ - ಮೂರ್ನಾಡು ರಸ್ತೆಯ ಮುತ್ತಾರ್ಮುಡಿಯಿಂದ ಬಿಳಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟ್ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಗ್ರಾಮೀಣ ರಸ್ತೆಗಳನ್ನು ಸುಸಜ್ಜಿತ ಸರ್ವಋತು ಹಾಗೂ ಶಾಶ್ವತ ಬಾಳಿಕೆ ಬರುವ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಸದರಿ ರಸ್ತೆಗೆ ಮುಖ್ಯಮಂತ್ರಿಗಳು ನೀಡಿದ ೫೦ ಕೋಟಿ ರೂಪಾಯಿಗಳ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಗ್ರಾಮಸ್ಥರು ರಸ್ತೆ ಅಗಲೀಕರಣಕ್ಕೆ ಸ್ವಲ್ಪ ಜಾಗವನ್ನು ಬಿಟ್ಟುಕೊಡುವ ಕೆಲಸ ಮಾಡಬೇಕು ಎಂದು ವಿನಂತಿ ಮಾಡಿದ ಡಾ. ಮಂತರ್ ಗೌಡ, ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರು ನಿಗಾವಹಿಸಬೇಕು, ತೃಪ್ತಿಕರವಾಗಿಲ್ಲ ಎಂದು ಕಂಡುಬAದರೆ ತಕ್ಷಣವೇ ಮಾಹಿತಿ ನೀಡಿ ಎಂದು ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಹಿಂದೆ ಗ್ರಾಮೀಣ ರಸ್ತೆಗಳು ಐದು, ಹತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಐವತ್ತು ಅಥವಾ ನೂರು ಮೀಟರ್ ಕಾಂಕ್ರೀಟ್ ರಸ್ತೆ ನಡೆಯುತ್ತಿತ್ತು. ಈಗ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಪರಿಶ್ರಮದಿಂದ ಕೋಟಿ ರೂಪಾಯಿ ವೆಚ್ಚದಲ್ಲಿ ಕಿ.ಮೀ.ಗಟ್ಟಲೆ ಕಾಂಕ್ರೀಟ್ ರಸ್ತೆ ಎಲ್ಲಾ ಕಡೆ ನಿರ್ಮಾಣವಾಗುತ್ತಿದ್ದು ಇದೊಂದು ಆಶಾದಾಯಕ ಬೆಳವಣಿಗೆ ಎಂದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ, ಬೂತ್ ಅಧ್ಯಕ್ಷ ಪಾರೆಮಜಲು ರಾಜೇಶ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಶ್ ದೊಲ್ಪಾಡಿ, ಪ್ರಧಾನ ಕಾರ್ಯದರ್ಶಿ ರವೂಫ್ ಶೇಖ್, ಪ್ರಮುಖರಾದ ಧನಂಜಯ, ಶಿವ ಕುಮಾರ್, ದೇರಜೆ ಕಿರಣ್, ಜಲೀಲ್ ಮೂರ್ನಾಡು, ತೆಕ್ಕಡ ರಮೇಶ್, ಪಾರೆಮಜಲು ಸುಬ್ಬಯ್ಯ, ಕೇಕಡ ರಮೇಶ್, ಪಾರೆಮಜಲು ಅನಿತಾ, ವಿ.ಜಿ. ಮೋಹನ್, ತೆಕ್ಕಡೆ ಪ್ರಸನ್ನ, ಕುಮಾರ, ಅರಮನೆ ಪಿ. ವಸಂತ, ಬಿಳಿಯಾರ ವಿನೋದ್ ಕುಮಾರ್, ಪಾರೆಮಜಲು ನಂದಕುಮಾರ್ ಸೇರಿದಂತೆ ಸ್ಥಳೀಯ ನಿವಾಸಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.