ಭಾಗಮಂಡಲ, ಸೆ. ೨೭: ಶ್ರೀ ಕಾವೇರಿ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಭಾನುವಾರ ಪತ್ತಾಯಕ್ಕೆ ಅಕ್ಕಿ ಹಾಕುವುದರ ಮೂಲಕ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ೮.೪೫ ಗಂಟೆಗೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಸಾಂಪ್ರದಾಯಿಕ ಆಚರಣೆ ಜರುಗಿತು. ಸಂಪ್ರದಾಯದAತೆ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಬಳ್ಳಡ್ಕ ಕುಟುಂಬಸ್ಥರು ಐನ್ಮನೆಯಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿ ನಂತರ ಪತ್ತಾಯಕ್ಕೆ ಹಾಕುವ ಅಕ್ಕಿಯನ್ನು ತಂದು ಭಗಂಡೇಶ್ವರ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಸಾಂಪ್ರದಾಯಿಕ ಆಚರಣೆ ನೆರವೇರಿಸಿದರು.
ಈ ಸಂದರ್ಭ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪಾರುಪತ್ತೆಗಾರ ಪೊನ್ನಣ್ಣ, ಬಳ್ಳಡ್ಕ ಕುಟುಂಬಸ್ಥರು, ಸ್ಥಳೀಯರು ಉಪಸ್ಥಿತರಿದ್ದರು. ಇಂದಿನಿAದ ಕಾವೇರಿ ತುಲಾಸಂಕ್ರಮಣದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ ಐದರಂದು ಸೋಮವಾರ ಬೆಳಿಗ್ಗೆ ೧೦.೩೫ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮಹೂರ್ತ ನೆರವೇರಲಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಕ್ಟೋಬರ್ ೧೫ ರಂದು ಗುರುವಾರ ಮಧ್ಯಾಹ್ನ ೧೨:೩೫ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆಗೆ ಅಕ್ಕಿ ಹಾಕಲಾಗುವುದು. ಅಕ್ಟೋಬರ್ ೧೫ ರಂದು ಗುರುವಾರ ಸಂಜೆ ೬ ಗಂಟೆ ೩ ನಿಮಿಷಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸಲಾಗುವುದು. ಅಕ್ಟೋಬರ್ ೧೭ ರಂದು ಶನಿವಾರ ರಾತ್ರಿ ೭.೩೦ಕ್ಕೆ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ.
- ಸುನಿಲ್ ಕುಯ್ಯಮುಡಿ