ವೀರಾಜಪೇಟೆ, ಸೆ. ೨೭: ಕೊಡಗು ಜಿಲ್ಲೆಯಲ್ಲಿ ಪದವಿ ಶಿಕ್ಷಣ ಓದುತ್ತಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ನೀಡುವ ವಿದ್ಯಾರ್ಥಿ ವೇತನವನ್ನು ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದತ್ತಿ ನಿಧಿಯ ಟ್ರಸ್ಟಿಗಳು, ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು, "ಮಕ್ಕಳಿಗೆ ಸ್ಪೂರ್ತಿ ತುಂಬುವ ಕೆಲಸ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು. ಪ್ರತಿಯೊಬ್ಬರೂ ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಕಷ್ಟ ಎಂಬುದು ಪ್ರಕೃತಿ ನಿಯಮ, ಅದನ್ನು ಜೀರ್ಣಿಸಿಕೊಂಡು ಮುಂದೆ ಸಾಗಬೇಕು. ನಿಮ್ಮ ಭವಿಷ್ಯಕ್ಕೆ ನೆಲೆ ರೂಪಿಸಿಕೊಳ್ಳಬೇಕು ಎಂದರು. ಏನನ್ನಾದರೂ ಸಾಧಿಸುವ ಛಲ, ಹಠ ಇರಬೇಕು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಯಶಸ್ವಿಯಾದರೆ ನಿಮ್ಮ ಕುಟುಂಬಕ್ಕೆ, ಊರಿಗೆ, ಸಮಾಜಕ್ಕೆ ದಾರಿ ತೋರಿದಂತೆ. ಸವಾಲನ್ನು ಎದುರಿಸಿ ಭವಿಷ್ಯ ರೂಪಿಸುವ ಶಕ್ತಿ ನಿಮ್ಮಲ್ಲಿದೆ, ಅದನ್ನು ಅರಿತು ಯಶಸ್ಸು ಪಡೆಯಿರಿ" ಎಂದರು.

ಆಧುನಿಕ ಸಮಾಜದಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರುವ ಮೂಲಕ ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಬೇಕು. ಹೆಣ್ಣುಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಮಹಿಳೆಯರಿಗೆ ಸಮಾಜದಲ್ಲಿ ಸಾಕಷ್ಟು ಅಡೆತಡೆಗಳಿವೆಯಾದರೂ ಎಲ್ಲವನ್ನೂ ಮೆಟ್ಟಿನಿಂತು ದೃಢಮಹಿಳೆಯಾಗಿ ಹೊರಹೊಮ್ಮಬೇಕು ಎಂದರು.

೨೦೨೦ರ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಮೊದಲ ಬಾರಿಗೆ ತಂದೆ-ತಾಯಿಯ ಹೆಸರಿನಲ್ಲಿ ದತ್ತಿ ಸ್ಥಾಪಿಸಲಾಯಿತು. ತಾಯಿ ಪೊನ್ನಮ್ಮ ಅವರಿಗೆ ಹೆಣ್ಣುಮಕ್ಕಳು ಅಂದರೆ ಅಪಾರ ಪ್ರೀತಿ, ಹಾಗಾಗಿ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡಲು ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು. ಅರ್ಹ ವಿದ್ಯಾರ್ಥಿಗಳ ಆಯ್ಕೆ ಪಾರದರ್ಶಕವಾಗಿ ಹಾಗೂ ರಾಜಕೀಯ ರಹಿತವಾಗಿ ನಡೆಯಬೇಕೆಂಬ ಉದ್ದೇಶದಿಂದ ಅರ್ಜಿಗಳನ್ನು ಶಕ್ತಿ ದಿನಪತ್ರಿಕೆಯ ಮೂಲಕ ಪರಿಶೀಲಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ರಾಜಕೀಯ ರಹಿತವಾಗಿ ಪಾರದರ್ಶಕವಾಗಿ ಈ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಟ್ಟಿಕೊಂಡು, ಸಮಾಜಕ್ಕೆ ಕೃತಜ್ಞತಾ ಭಾವದಿಂದ ಸೇವೆ ಸಲ್ಲಿಸಬೇಕು. ಜನಪರ ಸೇವೆ, ಜನಪರ ಕಾಳಜಿ ನನ್ನ ಜೀವನದ ಅವಿಭಾಜ್ಯ ಅಂಗ. ರಾಜಕೀಯ ರಹಿತವಾಗಿ ಈ ಕಾರ್ಯಕ್ರಮ ಆಗಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಶಾಸಕ ಪೊನ್ನಣ್ಣ ಅವರು ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಇಲ್ಲಿ ಪಾರದರ್ಶಕತೆ ಇರಬೇಕು, ಯಾರ ಒತ್ತಡ ಇರಬಾರದು, ನಾವು ಮಾಡಿದ ಕಾರ್ಯ ಸಫಲವಾಗಬೇಕು, ಅದಕ್ಕೆ ಪ್ರತಿಫಲವಾಗಿ ಉತ್ತಮ ಫಲಿತಾಂಶ ದೊರಕಬೇಕು, ಇಲ್ಲಿ ವಿದ್ಯಾರ್ಥಿವೇತನ ಪಡೆದುಕೊಂಡ ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಿದ್ದಾರೆ ಎಂದರೆ ದಾನಿಗೆ ದೊಡ್ಡ ಸಮಾಧಾನ. ದಾನ ಮಾಡುವವರು ಬಯಸೋದು ಕೇವಲ ಫಲಿತಾಂಶವನ್ನೇ ಹೊರತು ಕೃತಜ್ಞತೆಯನ್ನಲ್ಲ ಎಂದರು.

ಈ ರೀತಿಯ ಕಾರ್ಯಕ್ರಮದ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವ ಪೊನ್ನಣ್ಣ ಅವರ ಸೇವೆ ಅನನ್ಯ. ವಿದ್ಯಾರ್ಥಿ ವೇತನ ನೀಡುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಹಾಗೆಯೇ ವಿದ್ಯಾರ್ಥಿಗಳು ಸಮಾಜದ ನಿರ್ಮಾತೃಗಳಾಗಿದ್ದು ಇವರ ಕೊಡುಗೆ ಬಹಳಷ್ಟಿದೆ ಎಂದರು.

ಶಕ್ತಿ ದಿನಪತ್ರಿಕೆಯ ಸಹ ಸಂಪಾದಕ ಪ್ರಜ್ವಲ್ ರಾಜೇಂದ್ರ ಅವರು ಮಾತನಾಡಿ, ಅರ್ಜಿಗಳನ್ನು ಬರೆಯುವಾಗ ಕೆಲ ವಿದ್ಯಾರ್ಥಿಗಳು ಅಪೂರ್ಣ ಮಾಹಿತಿ ನೀಡುತ್ತಿದ್ದಾರೆ. ಅರ್ಜಿಗಳಲ್ಲಿ ಸಮರ್ಪಕ ಮಾಹಿತಿ ನೀಡದಿದ್ದರೆ ಮುಂದಿನ ವೃತ್ತಿ ಜೀವನದಲ್ಲಿಯೂ ಕಷ್ಟವಾಗಲಿದೆ. ಪ್ರಸ್ತುತ ಎ.ಐ ವ್ಯಾಪಕ ಬೆಳವಣಿಗೆಯಿಂದ ಕೆಲಸಗಳು ದೊರಕುವುದು ಕಷ್ಟಸಾಧ್ಯವಾಗುತ್ತಿದೆ. ಈ ಕಾರಣದಿಂದ ವಿದ್ಯಾರ್ಥಿಗಳು ಅರ್ಜಿ ಬರೆಯುವುದನ್ನು ನಿರ್ಲಕ್ಷಿಸದೆ ಎಲ್ಲ ದಾಖಲೆಗಳೊಂದಿಗೆ ಸಮರ್ಪಕವಾಗಿ ಅರ್ಜಿ ಬರೆಯಲು ಕಲಿಯಬೇಕೆಂದರು.

ಪಾಲಿಬೆಟ್ಟ ಚೆಶೈರ್ ಹೋಂ ನ ಮುಖ್ಯಸ್ಥರಾದ ಗೀತಾ ಚಂಗಪ್ಪ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿ ಮಾತನಾಡಿ, ಪ್ರತಿಯೊಬ್ಬರಿಗೂ ಒಂದೊAದು ಹವ್ಯಾಸ ಇರಬೇಕು, ಸಾಮಾನ್ಯ ಜ್ಞಾನ ಇರಬೇಕು. ಹೆಣ್ಣಿನ ನಿಜವಾದ ಜೀವನ ಪ್ರಾರಂಭವಾಗುವದೇ ಕಾಲೇಜು ಹಂತ ಮುಗಿದಮೇಲೆ. ನಯ, ವಿನಯ, ಆಚಾರ ವಿಚಾರ ಪಾಲನೆ ಮಾಡುವುದರೊಂದಿಗೆ ಸಮಾಜದ ಮುಂಚೂಣಿ ಸ್ಥಾನವನ್ನು ಮಹಿಳೆಯರು ಅಲಂಕರಿಸಬೇಕು. ಪ್ರತಿಯೊಬ್ಬರೂ ಉನ್ನತ ವಿದ್ಯಾಭ್ಯಾಸ ಮಾಡಿ, ಸಮಾಜದ ಉನ್ನತ ಸ್ಥರಕ್ಕೆ ಏರುವಂತಾಗಬೇಕು. ಭವಿಷ್ಯದಲ್ಲಿ ಅವರು ಕೂಡ ಇತರರಿಗೆ ವಿದ್ಯಾರ್ಥಿವೇತನ ನೀಡುವಂತಾಗಬೇಕೆAದರು.

ಸಮಾರಂಭದ ವೇದಿಕೆಯಲ್ಲಿ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಕುಟುಂಬದ ಹಿರಿಯರಾದ ಮಾಚಿಮಂಡ ಗಂಗಮ್ಮ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಎ.ವಿ ಮಂಜುನಾಥ್ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.