ಮಡಿಕೇರಿ, ಸೆ. ೨೭: ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿನ ಮನೆಯೊಂದಕ್ಕೆ ಇಂದು ಬೆಳಿಗ್ಗೆ ಬಿಹಾರ ಮೂಲದ ಅಪರಿಚಿತ ವ್ಯಕ್ತಿಯೋರ್ವ ನುಗ್ಗಿ ಮನೆ ಮಂದಿಗೆ ಆತಂಕ ತಂದಿದ್ದ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿರ್ವಾಹಕರಾಗಿರುವ ನಗರದ ಹೊಸ ಬಡಾವಣೆಯ ನಿವಾಸಿ, ರೂಪೇಶ್ ಅವರು ಇಂದು ನಸುಕಿನಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಇವರ ಮನೆಗೆ ಎರಡು ಬಾಗಿಲು ಇರುವ ಹಿನ್ನೆಲೆ ಭಾನುವಾರವಾಗಿದ್ದರಿಂದ ಮನೆಯವರನ್ನು ಎಬ್ಬಿಸದೆ ಇವರು ಪತ್ನಿಗೆ ಹೇಳಿ ಮುಂಬಾಗಿಲು ಹಾಕಿಕೊಂಡು ತೆರಳಿದ್ದರು. ಕೆಲಹೊತ್ತಿನಲ್ಲಿ ಮನೆಯಲ್ಲಿ ಶಬ್ದ ಕೇಳಿ ಬಂದಾಗ ಪತ್ನಿ ಕರ್ತವ್ಯಕ್ಕೆ ತೆರಳಿದವರು ಮತ್ತೆ ಯಾಕೆ ವಾಪಾಸ್ಸು ಬಂದಿದ್ದಾರೆ ಎಂದು ಎದ್ದು ಬಂದಾಗ ಬಿಹಾರ ಮೂಲದ ಅಪರಿಚಿತ ವ್ಯಕ್ತಿ ಮನೆಯೊಳಗೆ ಸೇರಿಕೊಂಡಿದ್ದ. ಈತನನ್ನು ಗಮನಿಸಿ ಗಾಬರಿಗೊಂಡ ಅವರು ಬೊಬ್ಬೆ ಹಾಕಿ ಕೊಠಡಿಯೊಳಗೆ ಸೇರಿಕೊಂಡು ಪತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.

ಬಸ್ ನಿಲ್ದಾಣದಲ್ಲಿದ್ದ ಪತಿಯೂ ಗಾಬರಿಗೊಂಡು ಆಟೋದಲ್ಲಿ ಮನೆಗೆ ದೌಡಾಯಿಸಿದ್ದಾರೆ. ಅಷ್ಟರಲ್ಲಿ ಪಕ್ಕದ ಮನೆಯವರೂ ಆಗಮಿಸಿದ್ದರು. ನಂತರದಲ್ಲಿ ನೆರೆಯವರ ಸಹಕಾರದೊಂದಿಗೆ ಈ ಅಪರಿಚಿತ ವ್ಯಕ್ತಿಯನ್ನು ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಆರಂಭದಲ್ಲಿ ಪೊಲೀಸರು ಆತನನ್ನು ವಿಚಾರಿಸಿ ಬಿಟ್ಟು ಕಳುಹಿಸಿದ್ದರು. ಆದರೆ ನಂತರದಲ್ಲಿ ಈ ವಿಚಾರ ಮತ್ತೆ ತಿರುವು ಪಡೆದಿದ್ದು, ವಿಚಾರವರಿತ ಶಾಸಕರೂ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ಇರಿಸು - ಮುರಿಸುಗೊಂಡ ಪೊಲೀಸರು ಆತನನ್ನು ಮತ್ತೆ ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವ್ಯಕ್ತಿ ಬಿಹಾರ ಮೂಲದವನಾಗಿದ್ದು, ಮಾನಸಿಕವಾಗಿ ಅಸ್ಪಸ್ಥತೆ ಹೊಂದಿದ್ದಾನೆ ಎನ್ನಲಾಗಿದೆ. ಈತನೊಂದಿಗೆ ಆತನ ತಂದೆಯೂ ಇದ್ದು, ಬಳಿಕ ಎಚ್ಚರಿಕೆ ನೀಡಿ ಮಡಿಕೇರಿಯಲ್ಲಿರದಂತೆ ಸೂಚಿಸಿ ಮತ್ತೆ ಬಿಹಾರದತ್ತ ಕಳುಹಿಸಲು ಕ್ರಮಕೈಗೊಂಡಿದ್ದು, ಪ್ರಕರಣ ಇತ್ಯರ್ಥವಾಗಿದೆ.