ವೀರಾಜಪೇಟೆ, ಸೆ. ೨೬: ಇಲ್ಲಿನ ಗೌರಿ ಗಣೇಶ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಡಿಜೆ ವಾಹನದ ಮೇಲಿದ್ದ ನಾಲ್ವರು ಯುವಕರು ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ವೀರಾಜಪೇಟೆ ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ಗೌರಿ ಗಣೇಶ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭ ಶಿವಕೇರಿಯ ಶ್ರೀ ವಿನಾಯಕ ಯುವಕ ಸಮಿತಿಯ ಗೌರಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹೆಚ್ಚಿನ ಎತ್ತರಕ್ಕೆ ಅಲಂಕರಿಸಲಾಗಿದ್ದ ಡಿಜೆ ಸೌಂಡ್ಸ್ ವಾಹನವು ತೆರಳುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ೧೧ ಕೆ.ವಿ. ವಿದ್ಯುತ್ ತಂತಿ ವಾಹನಕ್ಕೆ ತಗುಲಿದ್ದು, ಪರಿಣಾಮ ವಾಹನದ ಮೇಲ್ಭಾಗದಲ್ಲಿದ್ದ ಡಿಜೆ ಸಿಬ್ಬಂದಿಗೆ ವಿದ್ಯುತ್ ಪ್ರವಹಿಸಿದ ಘಟನೆ ಸಂಭವಿಸಿದೆ.

ಹುಬ್ಬಳ್ಳಿ-ಧಾರವಾಡ ಮೂಲದ ಬಸವರಾಜು, ರಾಹುಲ್, ವಿನೋದ್ ಮತ್ತು ನವೀನ್ ಎಂಬ ನಾಲ್ವರು ಯುವಕರು ಘಟನೆಯಲ್ಲಿ ಗಾಯಗೊಂಡವರಾಗಿದ್ದು, ಎಲ್ಲರೂ ಅಂದಾಜು ೨೨ ರಿಂದ ೨೫ ವರ್ಷ ವಯಸ್ಸಿನವರಾಗಿದ್ದಾರೆ. ಗಾಯಗೊಂಡಿರುವ ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಗಾಯವಾಗಿದೆ.

ಘಟನೆ ಸಂಭವಿಸಿದ ತಕ್ಷಣವೇ ಗಾಯಾಳುಗಳನ್ನು ವೀರಾಜಪೇಟೆ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ಮಡಿಕೇರಿಯ ಆಸ್ಪತ್ರೆಗೆ ರವಾನಿಸಿ ಬಳಿಕ ಮತ್ತಷ್ಟು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಇಬ್ಬರಿಗೆ ಹಾಗೂ ಅಪೊಲೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭೇಟಿ

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತುರ್ತಾಗಿ ಉತ್ತಮ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕರು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಟ್ಟರು.