ವೀರಾಜಪೇಟೆ, ಸೆ. ೨೫: ಪಡುವಣದ ಬಾನಿನಲ್ಲಿ ಸೂರ್ಯ ಮುಳುಗಿ ಕತ್ತಲೆಯ ಪರದೆ ಇಳಿಯುತ್ತಿದ್ದಂತೆ, ಸಾವಿರಾರು ದೀಪಗಳ ಬೆಳಕಿನಲ್ಲಿ ವೀರಾಜಪೇಟೆ ಹೊಳೆಯತೊಡಗಿತು. ಆಕಾಶದೆತ್ತರಕ್ಕೆ ಚಿಮ್ಮಿದ ಬೆಳಕಿನ ಕಿರಣಗಳು, ಕಲಾತ್ಮಕವಾಗಿ ಅರಳಿದ ಮಂಟಪಗಳು ಹಾಗೂ ಭಕ್ತರ ಸಂಭ್ರಮದ ಅಲೆಗಳು ಐತಿಹಾಸಿಕ ಪಟ್ಟಣಕ್ಕೆ ಹಬ್ಬದ ಕಳೆ ತಂದವು. ಮೆರವಣಿಗೆಯ ವೈಭವ ಹಾಗೂ ಭಕ್ತಿಭಾವದ ಸೊಬಗು ಸೇರಿ ‘ಮಿನಿ ದಸರಾ’ ಎಂದೇ ಖ್ಯಾತಿ ಪಡೆದ ವೀರಾಜಪೇಟೆಯ ಗಣೇಶ ವಿಸರ್ಜನೋತ್ಸವಕ್ಕೆ ಅದ್ದೂರಿಯ ವರ್ಣರಂಜಿತ ತೆರೆ ಎಳೆಯಲಾಯಿತು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ವೀರಾಜಪೇಟೆ ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನೋತ್ಸವ ಅದ್ದೂರಿ ಹಾಗೂ ಉತ್ಸಾಹದಿಂದ ಕೂಡಿತ್ತು. ಜನರು ಸಂಭ್ರಮ, ಸಡಗರದಿಂದ ಶೋಭಾಯಾತ್ರೆಯನ್ನು ಕಣ್ತುಂಬಿಕೊAಡರು. ಗಣೇಶೋತ್ಸವದಂದು ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ೨೨ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಆಕರ್ಷಕವಾಗಿ ಸಾಗಿದ್ದು, ಶೋಭಾಯಾತ್ರೆ ಕಣ್ಮನ ಸೆಳೆಯಿತು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ವಿವಿಧೆಡೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನಗರದ ರಾಜಬೀದಿಗಳು ವಿದ್ಯುತ್ ದೀಪಗಳ ಅಲಂಕಾರದಿAದ ಕಂಗೊಳಿಸುತ್ತಿದ್ದವು.

ಗಡಿಯಾರ ಕಂಬದ ಬಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಈಡುಗಾಯಿ ಅರ್ಪಿಸಲಾಯಿತು. ಬಳಿಕ ಪುಷ್ಪಾಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಿಡಿಮದ್ದು ಸಿಡಿಸುವ ಮೂಲಕ ಇತರ ಗಣೇಶೋತ್ಸವ ಸಮಿತಿಗಳಿಗೆ ಮೂರ್ತಿಗಳನ್ನು ಮಂಟಪಗಳಿಗೆ ಸ್ಥಳಾಂತರಿಸಿ ಮೆರವಣಿಗೆಗೆ ಸಜ್ಜಾಗುವಂತೆ ಸಂದೇಶ ನೀಡಲಾಯಿತು. ಇದರೊಂದಿಗೆ ವಿಸರ್ಜನೋತ್ಸವಕ್ಕೆ ಮುನ್ನುಡಿ ಬರೆಯಲಾಯಿತು.

ಉತ್ಸವದ ಸಾರಥಿಯಾದ ಶ್ರೀ ಮಹಾಗಣಪತಿ ದೇವಾಲಯದ ಮೂರ್ತಿಯನ್ನು ಮೆರವಣಿಗೆ ಮೂಲಕ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಪ್ರದೇಶ ಗೌರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಉಳಿದ ಎಲ್ಲ ಮಂಟಪಗಳ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ದೊರೆಯಿತು.

ಎಲ್ಲ ಮಂಟಪಗಳಲ್ಲಿ ಗಣೇಶನನ್ನು ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಲಾಗಿದ್ದರೆ, ಶ್ರೀ ಬಸವೇಶ್ವರ ದೇವಾಲಯದ ಮಂಟಪದಲ್ಲಿ ಮಾತ್ರ ಐತಿಹಾಸಿಕ ಪ್ರತೀತಿ ಹೊಂದಿರುವ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಪ್ರದೇಶ ಗೌರಿಯನ್ನು ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಲಾಗಿತ್ತು.

೨೨ ಮಂಟಪಗಳ ಶೋಭಾಯಾತ್ರೆ

ಗಡಿಯಾರ ಕಂಬದ ಶ್ರೀ ಮಹಾಗಣಪತಿ ದೇವಾಲಯ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ಅರಸುನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ತೆಲುಗರ ಬೀದಿಯ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದ ವಿನಾಯಕ ಯುವಕ ಭಕ್ತ ಮಂಡಳಿ, ಮೀನುಪೇಟೆಯ (ಕಂಚಿಕಾಮಾಕ್ಷಿ ರಸ್ತೆ) ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಪುರಸಭೆಯ ಗಣಪತಿ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟದ ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ಗಣಪತಿ ಉತ್ಸವ ಸಮಿತಿ, ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ, ನೆಹರು ನಗರದ ನೇತಾಜಿ ಉತ್ಸವ ಸಮಿತಿ, ಗಣಪತಿ ಬೀದಿಯ (ಪಂಜರಪೇಟೆ) ಶ್ರೀ ಮಹಾಗಣಪತಿ ಸೇವಾ ಸಂಘ, ಮಲೆತಿರಿಕೆ ಬೆಟ್ಟದ ಶ್ರೀ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ-ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಚಿಕ್ಕಪೇಟೆ (ಛತ್ರಕೆರೆ) ಅಂಜನೇಯ ದೇವಾಲಯದ ಶ್ರೀ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಸುಂಕದ ಕಟ್ಟೆಯ ಶ್ರೀ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲದ ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ಗೌರಿಕೆರೆಯ ಶ್ರೀ ಗಣಪತಿ ಉತ್ಸವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಕುಕ್ಲೂರಿನ ಕುಂದತ್ ಗಣೇಶೋತ್ಸವ ಸಮಿತಿ, ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿ, ಕೆ.ಬೋಯಿಕೇರಿಯ ಕೆಂಕೇರಮ್ಮ ದೇವಾಲಯದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಹಾಗೂ ಗಾಂಧಿನಗರ ಗಣಪತಿ ಸೇವಾ ಸಮಿತಿಯ ಮಂಟಪಗಳು ನಗರದ ರಾಜಬೀದಿಯಲ್ಲಿ ಸಾಗಿದವು.

ಬೆಳಕಿನ ದಿಬ್ಬಣ

ರಾಜಬೀದಿಯಲ್ಲಿ ಸಾಗಿದ ಕಲಾತ್ಮಕ ಮಂಟಪಗಳ ಶೋಭಾಯಾತ್ರೆಯನ್ನು ಕಂಡು ಜನರು ಪುಳಕಿತರಾದರು. ಮಂಟಪಗಳಲ್ಲಿ ವಿವಿಧ ಭಂಗಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳಿಗೆ ಭಕ್ತರು ಪೂಜೆ ಸಲ್ಲಿಸಿ, ನಮಿಸಿ ಪುನೀತರಾದರು.

‘ಮಿನಿ ದಸರಾ’ ಎಂದೇ ಕರೆಸಿಕೊಳ್ಳುವ ವೀರಾಜಪೇಟೆ ಗಣೇಶ ವಿಸರ್ಜನೋತ್ಸವದಲ್ಲಿ ಬಾನೆತ್ತರಕ್ಕೆ ಚಿಮ್ಮಿದ ಬೆಳಕಿನ ವೈಭವದಿಂದ ಅಕ್ಷರಶಃ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಪಟ್ಟಣ ನವವಧುವಿನಂತೆ ಶೃಂಗಾರಗೊAಡು ಕಂಗೊಳಿಸುತ್ತಿತ್ತು. ಸಂಭ್ರಮದ ವಾತಾವರಣದಲ್ಲಿ ಭಕ್ತಾದಿಗಳು ಪ್ರತಿಷ್ಠಾಪಿತ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.

ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದ ಜನರು ಉತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು. ಬಳಿಕ ಗೌರಿಕೆರೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೂಲಕ ಉತ್ಸವ ಸಂಪನ್ನಗೊAಡಿತು.

ಶೋಭಾಯಾತ್ರೆಯುದ್ದಕ್ಕೂ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಇದರಿಂದ ವಿಸರ್ಜನೋತ್ಸವಕ್ಕೆ ಮತ್ತಷ್ಟು ರಂಗು ತುಂಬಿತು.

ಕೆಲವು ಸಮಿತಿಗಳು ವಾಲಗ ಹಾಗೂ ನಾದಸ್ವರದ ಮೂಲಕ ಸಾಂಪ್ರದಾಯಿಕ ಸಂಗೀತಕ್ಕೆ ಆದ್ಯತೆ ನೀಡಿದರೆ, ಉಳಿದ ಸಮಿತಿಗಳು ಧ್ವನಿವರ್ಧಕಗಳ ಮೂಲಕ ಸಂಭ್ರಮಿಸಿದರು. ರಾಜಬೀದಿಯಲ್ಲಿ ಯುವಕರು ಸೇರಿದಂತೆ ವಿವಿಧ ವಯೋಮಾನದ ಜನರು ನೃತ್ಯ ಮಾಡುತ್ತಾ ವಿಸರ್ಜನೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

- ಚಿತ್ರ, ವರದಿ : ಹೆಚ್.ಜೆ. ರಾಕೇಶ್, ಕಿಶೋರ್ ಶೆಟ್ಟಿ