ಪೊನ್ನಂಪೇಟೆ, ಸೆ.೨೪ : ಪೊನ್ನಂಪೇಟೆ ಇಗ್ಗುತಪ್ಪ ಕೊಡವ ಸೌಹಾರ್ದ ಸಂಘದ ಸಭಾಂಗಣದಲ್ಲಿ ನಡೆದ ಕಿಗ್ಗಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ೫ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯ ಪ್ರಶಸ್ತಿ ವಿಜೇತೆ, ಹಿರಿಯ ಸಮಾಜ ಸೇವಕಿ ಕೈಬಿಲಿರ ಪಾರ್ವತಿ ಬೋಪಯ್ಯ ಅವರಿಗೆ ವರ್ಷದ ಶ್ರೇಷ್ಠ ಮಹಿಳಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾರ್ವತಿ ಬೋಪಯ್ಯ, ಹಿರಿಯ ನಾಗರಿಕರ ವೇದಿಕೆ ಹಲವು ಜನಪರ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು, ಇದೇ ರೀತಿಯ ಸೇವಾ ಕಾರ್ಯಗಳು ಮುಂದುವರಿಯಲಿ ಎಂದು ಹಾರೈಸಿದರು.
ನಿವೃತ್ತ ಪ್ರಾಧ್ಯಾಪಕ ತೇಲಪಂಡ ಮಾದಪ್ಪ ಅವರು ವೇದಿಕೆಯ ಕಾರ್ಯಗಳನ್ನು ಶ್ಲಾಘಿಸಿ, ಹಿರಿಯರಿಗಾಗಿ ಇನ್ನಷ್ಟು ಜನಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಆಶಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಕಾರ್ಯಗಳಿಗೆ ರೂ.೫೦ ಸಾವಿರ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭ ವೇದಿಕೆಯ ಸ್ಥಾಪಕ ಅಧ್ಯಕ್ಷ ಕಾಟೀಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಹಿರಿಯ ನಾಗರಿಕರ ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಬದುಕಿಗೆ ಅಗತ್ಯವಾದ ನೆರವು ಒದಗಿಸುವ ಉದ್ದೇಶದಿಂದ ಕಿಗ್ಗಟ್ನಾಡ್ ಹಿರಿಯ ನಾಗರಿಕರ ವೇದಿಕೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಪೊನ್ನಂಪೇಟೆ ಭಾಗದ ಹಿರಿಯ ನಾಗರಿಕರಲ್ಲಿ ಉಂಟಾಗಿದ್ದ ಮಾನಸಿಕ ಒತ್ತಡವನ್ನು ನಿವಾರಿಸಿ, ಅವರ ಮಾನಸಿಕ ಕ್ಷಮತೆ ಹೆಚ್ಚಿಸುವುದರೊಂದಿಗೆ ಅಗತ್ಯ ನೆರವು ನೀಡುವ ಉದ್ದೇಶದಿಂದ ವೇದಿಕೆಯನ್ನು ಸ್ಥಾಪಿಸಲಾಯಿತು.
ಸ್ವಾತಂತ್ರ‍್ಯ ಪೂರ್ವದಲ್ಲಿ ಪೊನ್ನಂಪೇಟೆ ಕಿಗ್ಗಟ್ ನಾಡ್ ತಾಲೂಕಾಗಿದ್ದು, ಈ ಪ್ರದೇಶ ನೂರಾರು ಸ್ವಾತಂತ್ರ‍್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ವೀರಯೋಧರನ್ನು ದೇಶಕ್ಕೆ ನೀಡಿದೆ. ಆ ಪರಂಪರೆ ಶಾಶ್ವತವಾಗಿ ಉಳಿಯಬೇಕು ಎಂಬ ಆಶಯದಿಂದ ವೇದಿಕೆಗೆ ಕಿಗ್ಗಟ್ ನಾಡ್ ಹಿರಿಯ ನಾಗರಿಕರ ವೇದಿಕೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು. ಹಿರಿಯ ಸಮಾಜ ಸೇವಕಿ ಕೈಬಿಲಿರ ಪಾರ್ವತಿ ಬೋಪಯ್ಯ ಅವರು ವೇದಿಕೆಗೆ ರೂ. ೨೫ ಸಾವಿರ ದೇಣಿಗೆ ನೀಡಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಮಾತನಾಡಿ, ವೇದಿಕೆಯ ಕಚೇರಿಯಲ್ಲಿ ಕೊಡವ ಪುಸ್ತಕ ಪತ್ತಾಯ ಆರಂಭಿಸಲಾಗಿದ್ದು, ಸದಸ್ಯರು ಬಿಡುವಿನ ವೇಳೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಪೊನ್ನಂಪೇಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಸ್ ನಿಲ್ದಾಣಕ್ಕೆ ಈ ಹಿಂದೆ ಜಾಗ ದಾನ ಮಾಡಿದ ದಾನಿಗಳ ಹೆಸರು ಇಡುವಂತೆ ಆಡಳಿತ ವರ್ಗವನ್ನು ಒತ್ತಾಯಿಸುವುದಾಗಿ ತಿಳಿಸಿದರು. ಕೊಡಗು ವಿಶ್ವವಿದ್ಯಾಲಯಕ್ಕೆ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಅವರ ಹೆಸರಿಡಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಕಾಳಿಮಾಡ ಶಿವಪ್ಪ, ಮಡಿಕೇರಿ ಎಫ್‌ಎಂಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ತೇಲಪಂಡ ಮಾದಪ್ಪ ಹಾಗೂ ಚೆಕ್ಕೇರ ಸನ್ನಿ ಮೊಣ್ಣಪ್ಪ ಮಾತನಾಡಿದರು.
ಇದೇ ಸಂದರ್ಭ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವೇದಿಕೆಯ ಸದಸ್ಯರ ಮೊಮ್ಮಕ್ಕಳಾದ ದೇಯಂಡ ಪಿ. ಬೋಜಮ್ಮ, ಕಾಟೀಮಾಡ ಡಿ. ಭಾಷಿತ ಹಾಗೂ ಅಚ್ಚಿಯಂಡ ಜಿ. ದೃತಿ ಅವರಿಗೆ ವೇದಿಕೆಯ ವಿದ್ಯಾನಿಧಿಯಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
೯೦ ವರ್ಷ ಮೇಲ್ಪಟ್ಟ ವೇದಿಕೆಯ ಹಿರಿಯ ಸದಸ್ಯರಾದ ನಿವೃತ್ತ ಶಿಕ್ಷಕ ಪಾರುವಂಗಡ ಮೊಣ್ಣಪ್ಪ, ನಿವೃತ್ತ ಸೈನಿಕ ಮಂಡAಗಡ ಪೂವಯ್ಯ ಹಾಗೂ ನಿವೃತ್ತ ಪೊಲೀಸ್ ಉಪನಿರೀಕ್ಷಕ ತೀತಮಾಡ ಮಂದಣ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಂಡೇಚAಡ ಗಣೇಶ್, ಖಜಾಂಚಿ ಐನಂಡ ಕೆ. ಮಂದಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮನ ಸುಬ್ರಮಣಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ನೆರೆಯಂಡಮ್ಮನ ಸುಬ್ರಮಣಿ ಪ್ರಾರ್ಥಿಸಿ, ಚೇಂದಿರ ಬೋಪಣ್ಣ ನಿರೂಪಿಸಿದರು.