ಮಡಿಕೇರಿ, ಸೆ. ೨೩: ವಿದ್ಯಾರ್ಥಿಗಳು ಪ್ರತಿನಿತ್ಯ ಹೆಚ್ಚಾಗಿ ಬಳಸುವ ಪ್ಲಾಸ್ಟಿಕ್ ಪೆನ್ನುಗಳನ್ನು ಕಸದೊಂದಿಗೆ ಎಸೆಯದೆ, ಪ್ರತ್ಯೇಕವಾಗಿ ಸಂಗ್ರಹಿಸಿ ಗ್ರೀನ್ ವಿಷನ್ ಗ್ಲೋಬಲ್ ಸಂಸ್ಥೆಗೆ ನೀಡಿದರೆ ಅದನ್ನು ಪುನರ್ಬಳಕೆ ಮಾಡಬಹುದು. ಈ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ಮರುಬಳಸಲು ಅಥವಾ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ವಿದ್ಯಾರ್ಥಿಗಳೂ ಕೈಜೋಡಿಸಬಹುದು ಎಂದು ಗ್ರೀನ್ ವಿಷನ್ ಗ್ಲೋಬಲ್ ಸಂಸ್ಥೆಯ ಪರಿಸರ ಇಂಜಿನಿಯರ್ ಬಾಲಕೃಷ್ಣ ನಾಯಕ ತಿಳಿಸಿದರು.

ಇಲ್ಲಿನ ಮಹದೇವಪೇಟೆಯಲ್ಲಿರುವ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ನಡೆದ ‘ಸ್ವಚ್ಛತಾ ಹಿ ಸೇವಾ-೨೦೨೬’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯವಾಗಿ ಮರುಬಳಕೆ ವಸ್ತುಗಳನ್ನು ಸಂಗ್ರಹಿಸಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರು.

ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ಮಾತನಾಡಿ ಮನೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. ಜೊತೆಗೆ, ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ವಿಂಗಡಣೆ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಿಸರ ಸಂರಕ್ಷಣೆ, ಸ್ವಚ್ಛತೆ ಮತ್ತು ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಕುರಿತು ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಿದರು.

ಮಡಿಕೇರಿ ನಗರಸಭೆಯ ಸಮುದಾಯ ಸಂಘಟಕರಾದ ಜಬೀನ, ಮಮತಾ, ದೀಪಿಕಾ, ಸುನಿತಾ, ಶಾಲೆಯ ಪ್ರಾಂಶುಪಾಲರಾದ ಜಾಯ್ತಿ ವಿನಯ, ಉಪ ಪ್ರಾಂಶುಪಾಲರಾದ ಸುಲ್ಲತ್, ಶಾಲೆಯ ಇಕೋ ಕ್ಲಬ್ ಸಂಯೋಜಕರಾದ ಶೈಲಾ ಹಾಗೂ ಸುಹೇಲ ಭಾಗವಹಿಸಿದ್ದರು.