ನಾಪೋಕ್ಲು, ಸೆ. ೨೩: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವತಿಯಿಂದ ಸ್ಥಳೀಯ ಕೊಡವ ಸಮಾಜದಲ್ಲಿ ಲಯನ್ಸ್ ಪ್ರಾದೇಶಿಕ ಅಧ್ಯಕ್ಷರ ಭೇಟಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅಧ್ಯಕ್ಷ ಬಾಲಕೃಷ್ಣ ಅಪ್ಪಣಮಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದ ಏಳಿಗೆಗೆ ಶ್ರಮಿಸಿದ ಉತ್ತಮ ಶಿಕ್ಷಕರನ್ನು ಸನ್ಮಾನಿಸುವುದು ಲಯನ್ಸ್ ಕ್ಲಬ್‌ನ ಕಾರ್ಯಕ್ರಮಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಕ್ಲಬ್ ವತಿಯಿಂದ ನಿವೃತ್ತ ಶಿಕ್ಷಕಿ ಬೊಳ್ಯಪ್ಪಂಡ ಆಶಾ ಬೋಪಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ ಅಧ್ಯಕ್ಷತೆ ವಹಿಸಿದ್ದರು. ಶೈಲಾ ಭೀಮಯ್ಯ ಪ್ರಾರ್ಥಿಸಿದ ಕಾರ್ಯಕ್ರಮವದಲ್ಲಿ ಕ್ಲಬ್ ಕಾರ್ಯದರ್ಶಿ ಸಿ.ಕೆ ತಿಮ್ಮಯ್ಯ ವರದಿ ವಾಚಿಸಿದರು. ಸನ್ಮಾನಿತರ ಪರಿಚಯವನ್ನು ಕೇಟೋಳಿರ ರತ್ನ ಚರ್ಮಣ ಹಾಗೂ ಪ್ರಾದೇಶಿಕ ಅಧ್ಯಕ್ಷರ ಪರಿಚಯವನ್ನು ಸುನಿಲ್ ಪೊರ್ಕೊಂಡ ಮಾಡಿದರು.
ಸೌಮ್ಯ ಬಾಲಕೃಷ್ಣ ಅಪ್ಪಣಮಯ್ಯ, ಲಯನ್ಸ್ ಜಿಲ್ಲಾ ರಾಯಭಾರಿ ಡಾ. ಪಂಚಮ್ ತಿಮ್ಮಯ್ಯ, ವಲಯ ಅಧ್ಯಕ್ಷ ಮದನ್ ಮಾದಯ್ಯ, ಕ್ಲಬ್ ಖಜಾಂಚಿ ಬಿ.ಕೆ. ಜಯ ಉತ್ತಪ್ಪ, ಲಿಯೋ ಕ್ಲಬ್ ಅಧ್ಯಕ್ಷ ದೃವ ದೇವಯ್ಯ, ಲಿಯೋ ಕಾರ್ಯದರ್ಶಿ ಎ. ರಿಚಾ ಪೂಣಚ್ಚ, ಖಜಾಂಚಿ ಎಂ.ಬಿ. ಹೇಮಾವತಿ ಹಾಗೂ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.