ಮಡಿಕೇರಿ, ಸೆ. ೨೩: ಅಸಹಾಯಕರು, ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದವರ ಧ್ವನಿಯಾಗಿ ಕಳೆದ ೩೫ ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ನಿರಂತರವಾಗಿ ಚಿಂತಕ ವಿ.ಪಿ. ಶಶಿಧರ್ ಅವರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದಿಂದ ತಾ. ೨೭ ರಂದು ಕುಶಾಲನಗರದಲ್ಲಿ ನಾಗರಿಕ ಸನ್ಮಾನ ನಡೆಯಲಿದೆ.

ಈ ಬಗ್ಗೆ ಬಳಗದ ಗೌರವಾಧ್ಯಕ್ಷÀ ಕೆ.ಎಸ್. ಕೃಷ್ಣೇಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಳೆದ ಹಲವು ದಶಕಗಳ ಕುಶಾಲನಗರ ವ್ಯಾಪ್ತಿಯ ಜನರ ಪ್ರಮುಖ ಆಶಯ ಹಾಗೂ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕಾವೇರಿ ತಾಲೂಕಿನ ಕನಸನ್ನು ಸಾಕಾರಗೊಳಿಸುವ ಹೋರಾಟದಲ್ಲಿ ವಿ.ಪಿ. ಶಶಿಧರ್ ಸಕ್ರಿಯವಾಗಿ ತೊಡಗಿಸಿಕೊಂಡು ಶ್ರಮಿಸಿದ್ದಾರೆ. ಇದರೊಂದಿಗೆ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ನಿರಂತರ ಹೋರಾಡಿರುವ ಅವರ ಸಾರ್ವಜನಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.

ತಾ. ೨೭ ರಂದು ಸಂಜೆ ೫ ಗಂಟೆಗೆ ಕುಶಾಲನಗರದ ತಾವರೆಕೆರೆಯ ಎಸ್‌ಎಲ್‌ಎನ್ ಗ್ರಾö್ಯಂಡ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುವ ಸಮಾರಂಭವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಅರಮೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ, ತನ್ವೀರ್ ಸೇಠ್, ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ, ಮಾಜಿ ಸಂಸದ ಹೆಚ್. ವಿಶ್ವನಾಥ್, ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಹಿರಿಯ ಮುಖಂಡ ಎಂ. ಲಕ್ಷ್ಮಣ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ, ಸಾಮಾಜಿಕ ಚಿಂತಕ ಹೆಚ್.ಕೆ. ವಿವೇಕಾನಂದ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ನಾಗರಿಕ ಸನ್ಮಾನಕ್ಕೂ ಮುನ್ನ ಸಂಜೆ ೪ ಗಂಟೆಗೆ "ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ" ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಪತ್ರಕರ್ತ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕ ನಜೀರ್ ಅಹಮದ್ ಉದ್ಘಾಟಿಸಲಿದ್ದಾರೆ. ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ ಮುನೀರ್ ಕಾಟಿಪಳ್ಳ ವಿಚಾರ ಮಂಡನೆ ಮಾಡಲಿದ್ದಾರೆ.

ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಆರ್. ಮಾದಪ್ಪ, ಜನಪರ ಹೋರಾಟಗಾರ ಪಿ.ಆರ್. ಭರತ್, ರೆಡ್‌ಕ್ರಾಸ್ ಅಧ್ಯಕ್ಷ ಎಸ್.ಕೆ. ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್. ನಾಗೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರಬಾಬು, ಹಿರಿಯ ರಾಜಕಾರಣಿ ಎಸ್.ಕೆ. ವೀರಪ್ಪ, ಪ್ರಗತಿಪರ ಚಿಂತಕ ನಂದ ಸುಬ್ಬಯ್ಯ ಹಾಗೂ ರೋಟರಿ ಸಂಸ್ಥೆ ಪ್ರತಿನಿಧಿ ಮನು ಪೆಮ್ಮಯ್ಯ ಭಾಗವಹಿಸಲಿದ್ದಾರೆ ಎಂದು ಮಾಹಿತಿಯಿತ್ತರು. ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಖಜಾಂಚಿ ಆನಂದ್ ಕುಮಾರ್, ನಿರ್ದೇಶಕರಾದ ನವೀದ್ ಖಾನ್, ರಫೀಕ್ ಖಾನ್, ಇರ್ಫಾನ್ ಎಂ.ಜೆ., ಅನಂತ್ ಉಪಸ್ಥಿತರಿದ್ದರು.