ವೀರಾಜಪೇಟೆ, ಸೆ. ೨೩: ಶತಮಾನಗಳಿಂದ ಪಟ್ಟಣದ ಅಂತರ್ಜಲ ಮೂಲವಾಗಿ ಹಾಗೂ ವಿವಿಧ ಧಾರ್ಮಿಕ ಉತ್ಸವಗಳ ಆಯಕಟ್ಟಿನ ಕೇಂದ್ರವಾಗಿ ಕಂಗೊಳಿಸುತ್ತಿರುವ ಗೌರಿಕೆರೆಯಲ್ಲಿ ಇದೀಗ ಮತ್ತೊಮ್ಮೆ ಗೌರಿ-ಗಣೇಶ ವಿಸರ್ಜನೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ತಾ. ೨೫ ರಂದು ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಮಿತಿಗಳ ಗೌರಿ ಗಣೇಶ ಮೂರ್ತಿಗಳ ನಡೆಯಲಿದ್ದು, ತಾ.೨೬ರ ಬೆಳಗ್ಗಿನ ಜಾವ ಐತಿಹಾಸಿಕ ಗೌರಿಕೆರೆಯಲ್ಲಿ ೨೨ ಸಮಿತಿಗಳ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ನೆರವೇರಲಿದೆ.
ದಶಕಗಳಿಂದ ನಡೆದುಬಂದ ಸಾಂಪ್ರದಾಯದAತೆ ಮೊದಲಿಗೆ ಗಣಪತಿ ದೇವಾಲಯದ ಉತ್ಸವ ಮೂರ್ತಿಯನ್ನು ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ತದನಂತರ ಬಸವೇಶ್ವರ ದೇವಸ್ಥಾನದ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಿದ ಬಳಿಕ, ಉಳಿದ ಎಲ್ಲಾ ಸಮಿತಿಗಳ ಮೂರ್ತಿಗಳ ವಿಸರ್ಜನೋತ್ಸವವು ಅನುಕ್ರಮವಾಗಿ ಜರುಗಲಿದೆ.
ನವೀಕೃತಗೊಂಡ ಗೌರಿಕೆರೆ
ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಮುತುವರ್ಜಿಯಿಂದ ಸುಮಾರು ರೂ ೧.೩೧ ಕೋಟಿ ವೆಚ್ಚದಲ್ಲಿ ಗೌರಿಕೆರೆಯ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಂಡಿದೆ.
ನವೀಕರಣದ ಬಳಿಕ ಗೌರಿಕೆರೆಯು ಸುಸಜ್ಜಿತ ಹಾಗೂ ಸುಂದರವಾಗಿ ರೂಪುಗೊಂಡಿದ್ದು, ಕೆರೆಯ ವಾರ್ಡಿನ ನಿಕಟಪೂರ್ವ ಸದಸ್ಯ ಸಿ.ಕೆ. ಪೃಥ್ವಿನಾಥ್ ಅವರ ಶ್ರಮ ಹಾಗೂ ಸ್ಥಳೀಯರ ಸಹಕಾರವೂ ಈ ಅಭಿವೃದ್ಧಿಗೆ ಪೂರಕವಾಗಿದೆ. ವಿಸರ್ಜನೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ವೀರಾಜಪೇಟೆ ಪುರಸಭೆ ವತಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮೆರವಣಿಗೆ ಸಾಗುವ ಮುಖ್ಯ ರಸ್ತೆಗಳಲ್ಲಿದ್ದ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಗೌರಿಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗೌರಿಕೆರೆಯಲ್ಲಿ ಮೂರ್ತಿಗಳನ್ನು ಸುರಕ್ಷಿತವಾಗಿ ವಿಸರ್ಜಿಸಲು ಸುಸಜ್ಜಿತ ತೆಪ್ಪದ ವ್ಯವಸ್ಥೆ ಮಾಡಲಾಗಿದೆ.
ಕೆರೆಯ ಸುತ್ತಮುತ್ತ ಹಾಗೂ ಮೆರವಣಿಗೆ ಮಾರ್ಗದುದ್ದಕ್ಕೂ ಹೈಮಾಸ್ಟ್ ದೀಪಗಳು ಮತ್ತು ಅಲಂಕಾರಿಕ ಲೈಟಿಂಗ್ಸ್ಗಳನ್ನು ಅಳವಡಿಸಲಾಗಿದ್ದು, ಎಲ್ಲಾ ಬೀದಿ ದೀಪಗಳನ್ನೂ ದುರಸ್ತಿಗೊಳಿಸಲಾಗಿದೆ.
ಸಿಸಿಟಿವಿ ಭದ್ರತೆ
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಸ್ಥಳಗಳಲ್ಲಿ ಹಾಗೂ ಕೆರೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ.
ಶಾಸಕರ ಮನವಿ
ವೀರಾಜಪೇಟೆಯ ಐತಿಹಾಸಿಕ ಗೌರಿಕೆರೆಯನ್ನು ಸುಮಾರು ೧.೩೧ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ, ಪಟ್ಟಣದ ಸಾಂಸ್ಕöÈತಿಕ ಹಾಗೂ ಧಾರ್ಮಿಕ ಆಚರಣೆಗಳಿಗೆ ಸುಸಜ್ಜಿತವಾಗಿ ರೂಪಿಸಲಾಗಿದೆ. ಈ ಬಾರಿಯ ಗೌರಿ-ಗಣೇಶ ವಿಸರ್ಜನೋತ್ಸವವು ಅತ್ಯಂತ ವೈಭವದಿಂದ ಹಾಗೂ ಶಾಂತಿಯುತವಾಗಿ ನಡೆಯಲಿದ್ದು, ಭಕ್ತಾದಿಗಳು ಮತ್ತು ಸಾರ್ವಜನಿಕರು ಶಿಸ್ತಿನಿಂದ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಮನವಿ ಮಾಡಿದ್ದಾರೆ.
ಎಸ್ಪಿ ಕೋರಿಕೆ
ವೀರಾಜಪೇಟೆ ಗೌರಿ-ಗಣೇಶ ವಿಸರ್ಜನೋತ್ಸವ ಹಾಗೂ ಬೃಹತ್ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಹಾಗೂ ಗೌರಿಕೆರೆ ಆವರಣದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದ್ದು, ಸಂಚಾರ ಸುಗಮಗೊಳಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಹಾಗೂ ಆಯೋಜಕರು ಶಾಂತಿ ಮತ್ತು ಸೌಹಾರ್ದತೆ ಕಾಪಾಡಿ ಕೊಂಡು ಪೊಲೀಸ್ ಇಲಾಖೆ ಯೊಂದಿಗೆ ಸಹಕರಿಸಬೇಕು ಎಂದು ಎಸ್ಪಿ ಬಿಂದುಮಣಿ ಕೋರಿದ್ದಾರೆ. ವಿಸರ್ಜನೋತ್ಸವ ಹಾಗೂ ಮೆರವಣಿಗೆಯ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. ಮೆರವಣಿಗೆ ಮಾರ್ಗದ ರಸ್ತೆ ಗುಂಡಿಗಳನ್ನು ಮುಚ್ಚ ಲಾಗಿದ್ದು, ಕೆರೆಯ ಸುತ್ತಲೂ ವಿದ್ಯುತ್ ದೀಪ, ಸಿಸಿಟಿವಿ ಕಣ್ಣಾವಲು ಹಾಗೂ ತೆಪ್ಪದ ವ್ಯವಸ್ಥೆ ಮಾಡಲಾಗಿದೆ. ಸಾರ್ವ ಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಆಡಳಿತದೊಂದಿಗೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಹೇಳಿದ್ದಾರೆ.
ವರದಿ ಈಶಾನ್ವಿ