ನಾಪೋಕ್ಲು, ಸೆ. ೨೨: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೂರ್ನಾಡು ಪದವಿ ಕಾಲೇಜಿನ ಜಂಟಿ ಸಹಯೋಗದಲ್ಲಿ ಹಂಚೆಟ್ಟಿರ ದಿ. ಕುಟ್ಟಪ್ಪ ಮತ್ತು ಕಾಮವ್ವ ದಂಪತಿ ಜ್ಞಾಪಕಾರ್ಥ ‘ಕೊಡಗಿನ ಜಾನಪದ ಕಲೆಗಳ ಪ್ರಾಕಾರಗಳು’ ಕುರಿತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ದಿ. ಮಹಾಬಲೇಶ್ವರ ಭಟ್ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಮೂರ್ನಾಡು ಪದವಿ ಕಾಲೇಜಿನಲ್ಲಿ ಜರುಗಿತು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಕಲ್ಪನಾ ಸಾಮ್ರಾಟ್ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ನಮ್ಮ ಪದವಿ ಕಾಲೇಜಿನಲ್ಲಿ ಕನ್ನಡದ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಹಲವು ಕನ್ನಡ ಪರ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ದಾನಿಗಳ ಉದ್ದೇಶವನ್ನು ಅರಿತು ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ-ಕಾಲೇಜುಗಳಲ್ಲಿ ಉಪಯುಕ್ತ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗು ತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಿ.ವಿ. ಶಿವಪ್ಪ ಕನ್ನಡದ ಏಳುಬೀಳು ಗಳ ಬಗ್ಗೆ ಸಮೀಕ್ಷೆ ವಿಷಯ ಕುರಿತು ಮಾತನಾಡಿ, ಕನ್ನಡ ಭಾಷೆ ಬೆಳೆಯುತ್ತಿರುವುದು ಹಾಗೂ ಉಳಿಯುತ್ತಿರುವುದು ಹಳ್ಳಿಗಳಿಂದ ಮತ್ತು ಜಾನಪದದಿಂದ. ಭಾಷೆಯನ್ನು ನಾವು ಕಲಿತು ಇತರರಿಗೆ ಕಲಿಸಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ದತ್ತಿ ದಾನಿಗಳಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ನಮ್ಮ ದಿನನಿತ್ಯದ ಬದುಕಿಗೂ ಜಾನಪದಕ್ಕೂ ಅವಿನಾಭಾವ ಸಂಬAಧವಿದೆ ಎಂದರು.

ಪ್ರಬAಧ ಸ್ಪರ್ಧೆಯ ವಿಜೇತರು: ‘ಕೊಡಗಿನ ಜಾನಪದ ಪ್ರಾಕಾರಗಳು' ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ವೇದ ಪ್ರಥಮ, ಅಂತಿಮ ಬಿ.ಕಾಂ. ವಿದ್ಯಾರ್ಥಿ ಮನೋಜ್ ದ್ವಿತೀಯ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಕುಮಾರ್ ಎನ್.ಎಂ., ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಮಡಿಕೇರಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಗುಡ್ಡೇರ ಲಕ್ಷು ಸೋಮಣ್ಣ, ಮೂರ್ನಾಡು ಹೋಬಳಿ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಕೋಶಾಧಿಕಾರಿ ಎಂ. ಸೂರಜ್ ಹಾಗೂ ಆಕಾಶ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಮನಿಷಾ ಸ್ವಾಗತಿಸಿ, ಉಪನ್ಯಾಸಕ ಹರೀಶ್ ಕಿಗ್ಗಾಲು ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ವಂದಿಸಿದರು.