ಸಿದ್ದಾಪುರ, ಸೆ. ೨೨: ನೆಲ್ಲಿಹುದಿಕೇರಿ ಗ್ರಾಮದಲ್ಲಿ ಇರುವ ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ ವಿ.ಕೆ. ಲೋಕೇಶ್ ಹೇಳಿದರು.

ನೆಲ್ಲಿಹುದಿಕೇರಿ ಗ್ರಾಮದಲ್ಲಿ ಸಂಘದ ನೂತನ ಸಭಾಂಗಣದಲ್ಲಿ ನಡೆದ ೨೦೨೫-೨೦೨೬ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆಸುತ್ತಿರುವ ಬ್ಯಾಂಕ್ ಹಾಗೂ ಇನ್ನಿತರ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ಗಳಿಸಿದೆ. ಸಂಘವು ಸಂಘದ ಸದಸ್ಯರುಗಳಿಗೆ ವಿವಿಧ ಯೋಜನೆಗಳಡಿಯಲ್ಲಿ ಸಾಲಗಳನ್ನು ನೀಡುತ್ತಿದ್ದು ಸಕಾಲಕ್ಕೆ ಮರುಪಾವತಿ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ವತಿಯಿಂದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಈ ಹಿಂದೆ ಜಾಗವನ್ನು ಖರೀದಿಸಲಾಗಿದ್ದು ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಉತ್ತಮ ಯೋಜನೆಯನ್ನು ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಹಕಾರ ಸಂಘದ ವತಿಯಿಂದ ವರ್ಷಂಪ್ರತಿ ಸಂಘದ ಸದಸ್ಯರ ಮಕ್ಕಳಲ್ಲಿ ೧೦ನೇ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾವಂತ ಮಕ್ಕಳ ಗುರುತಿಸಿ ಅವರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುದಾಗಿ ಭರವಸೆಯನ್ನು ನೀಡಿದರು.

ಇದೇ ಸಂಧರ್ಭದಲ್ಲಿ ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ಕೆಲವು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಟಿ.ಆರ್. ಸಿದ್ದರಾಜು ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಸಂಘದ ಸದಸ್ಯರುಗಳಲ್ಲಿ ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಹೆಚ್ಚಿನ ಅಂಕ ಗಳಿಸಿದ ಮಕ್ಕಳಿಗೆ ಗೌರವಧನ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಭಾನು ಪ್ರಕಾಶ್, ನಿರ್ದೇಶಕರಾದ, ಪಿ.ಸಿ.ಅಚ್ಚಯ್ಯ, ಕೆ.ಎಂ. ಪ್ರಸನ್ನ, ಟಿ.ಸಿ. ಅಶೋಕ, ವಿ.ಕೆ. ಸುನಿಲ್ ಕುಮಾರ್, ಎಂ ಧರ್ಮಲಿಂಗ, ಡಿ.ಎಂ ತೇಜಸ್, ಸುಪ್ರೀಂ ಕೆ.ಜೆ, ಎಂ.ಎನ್ ಹರಣಿ, ಆರ್ ಸುಧರ್ಮ, ಆರ್. ಪ್ರಮೀಳಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಿಚಂಡ ಕಾರ್ಯಪ್ಪ, ಹಾಜರಿದ್ದರು. ಸಂಘದ ಉಪಾಧ್ಯಕ್ಷ ಹಳಗದ್ದೆ ಭಾನುಪ್ರಕಾಶ್ ಸ್ವಾಗತಿಸಿ ನಿರ್ದೇಶಕ ಟಿ.ಸಿ. ಅಶೋಕ್ ವಂದಿಸಿದರು.