ಹೆಬ್ಬಾಲೆ, ಸೆ. ೨೨: ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮದ ರೈತ ಸಮುದಾಯ ಭವನದಲ್ಲಿ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಬರಪೀಡಿತ ತಾಲೂಕು ಪಟ್ಟಿಗೆ ಕುಶಾಲನಗರ ತಾಲೂಕು ಸೇರ್ಪಡೆ ಮಾಡದಿರುವ ಬಗ್ಗೆ ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವಂತೆ ಆಗ್ರಹಿಸಿದರು.
ಚಿನ್ನಾಭರಣ ಸಾಲವನ್ನು ರೂ. ೨೦ ಲಕ್ಷದವರೆಗೆ ಏರಿಕೆ ಮಾಡಲು ಹಾಗೂ ಜಾಮೀನು ಸಾಲವನ್ನು ರೂ. ೨೦ ಲಕ್ಷಕ್ಕೆ ಏರಿಸಲು ಸದಸ್ಯರ ಒಮ್ಮತದೊಂದಿಗೆ ಸಂಘದ ಬೈಲಾ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಸಂಘದ ಲಾಭಾಂಶದಲ್ಲಿ ಶೇ. ೭ ರಷ್ಟು ಡಿವಿಡೆಂಡ್ ಅನ್ನು ಸದಸ್ಯರಿಗೆ ನೀಡಲು ತೀರ್ಮಾನಿಸಲಾಯಿತು. ಜೊತೆಗೆ ರೂ. ೨೦೦ ಇದ್ದ ಭತ್ಯೆಯನ್ನು ರೂ. ೩೦೦ಕ್ಕೆ ಏರಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಸದಸ್ಯ ಟಿ.ಕೆ. ಪಾಂಡುರAಗ ಮಾತನಾಡಿ, ರೈತ ಭವನಕ್ಕೆ ಮೂಲ ಸೌಕರ್ಯ ಕಲ್ಪಿಸಿ ಸುಸಜ್ಜಿತವಾದ ಭವನ ನಿರ್ಮಾಣ ಮಾಡಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಟಿ.ಸಿ. ಶಿವಕುಮಾರ್ ಮಾತನಾಡಿ, ರೈತರ ಅನುಕೂಲಕ್ಕಾಗಿ ಸಂಘದ ಮೂಲಕವೇ ರಾಸಾಯನಿಕ ಗೊಬ್ಬರ ಮಾರಾಟ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದೆ ಎಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮವಾಗಿ ಕಾರ್ಯ ಚಟುವಟಿಕೆಯೊಂದಿಗೆ ವಾರ್ಷಿಕ ವಹಿವಾಟು ನಡೆಸಿದ್ದು, ಲಾಭದಲ್ಲಿ ಮುನ್ನಡೆಯುತ್ತಿದೆ. ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಪ್ರೀತು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಗೌರಮಣಿ, ನಿರ್ದೇಶಕರಾದ ಕೆ.ಎಸ್. ಕೃಷ್ಣೇಗೌಡ, ಹೆಚ್.ಬಿ. ಚಂದ್ರಪ್ಪ, ಕೆ.ಬಿ. ದೇವರಾಜ್, ಉದಯಕುಮಾರ್, ಹೆಚ್.ಟಿ. ಕುಶಾಲಪ್ಪ, ಹೆಚ್.ಸಿ. ಮೂರ್ತಿ, ಟಿ.ಜೆ. ರವಿಕುಮಾರ್, ಟಿ.ಎ. ರವಿಚಂದ್ರ, ಟಿ.ಎಸ್. ಹರೀಶ್, ಹೇಮಾ, ಮೇಲ್ವಿಚಾರಕ ಭರತ್ ಕುಮಾರ್ ಇದ್ದರು.
ಚರ್ಚೆಯಲ್ಲಿ ಸದಸ್ಯರಾದ ಟಿ.ಪಿ. ಗಣೇಶ್, ಕೆ.ಹೆಚ್. ಸೋಮಚಾರಿ, ತ್ರೀನೇಶ್, ನವೀನ್, ಚಂದ್ರಶೇಖರ್, ಟಿ.ಕೆ. ವಸಂತ, ಲೋಕೇಶ್, ರವಿ, ಗಣೇಶ್, ಮೋಹನ್ ಮತ್ತಿತರರು ಪಾಲ್ಗೊಂಡು ಅಭಿವೃದ್ಧಿ ಪೂರಕ ಸಲಹೆಗಳನ್ನು ನೀಡಿದರು. ನಂತರ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಸಂಘದಲ್ಲಿ ಅಧಿಕ ಮೊತ್ತದ ಠೇವಣಿ ಇಟ್ಟ ಅಳುವಾರದ ಪ್ರೇಮಕುಮಾರ್ ಅವರಿಗೆ ಬಹುಮಾನ ನೀಡಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸ್ವಸಹಾಯ ಸಂಘಗಳಿಗೂ ಬಹುಮಾನ ವಿತರಿಸಲಾಯಿತು. ನಿರ್ದೇಶಕ ಹೆಚ್.ಬಿ. ಚಂದ್ರಪ್ಪ ವಂದಿಸಿದರು.