ಮಡಿಕೇರಿ, ಸೆ. ೨೨: ಮಡಿಕೇರಿ ನಗರಸಭಾ ಆಯುಕ್ತ ಹೆಚ್.ಎಸ್. ರಮೇಶ್ ಅವರಿಗೆ ಸೇರಿದ ಕರ್ಣಂಗೇರಿಯಲ್ಲಿರುವ ಮನೆ ಹಾಗೂ ಮಡಿಕೇರಿ ನಗರಸಭಾ ವಸತಿಗೃಹ ಕಚೇರಿ ಸೇರಿದಂತೆ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮುಂಜಾನೆ ಧಾಳಿ ನಡೆಸಿದ್ದು, ನಗದು ಮತ್ತು ಚಿನ್ನಾಭರಣಗಳ ವಿವರಗಳನ್ನು ಕಲೆ ಹಾಕಿದ್ದಾರೆ.

ಕೊಡಗಿನ ಲೋಕಾಯುಕ್ತ ಪೊಲೀಸರ ತಂಡ ಇಂದು ಮುಂಜಾನೆ ೬ ಗಂಟೆ ಸಮಯದಲ್ಲಿ ಮೂರು ಜೀಪುಗಳಲ್ಲಿ ಆಯುಕ್ತ ರಮೇಶ್ ಅವರ ಮನೆ ಹಾಗೂ ವಸತಿಗೃಹ ಕಚೇರಿ ಸೇರಿದಂತೆ ೩ ಜಾಗಗಳಲ್ಲಿ ಏಕಕಾಲಕ್ಕೆ ಧಾಳಿ ನಡೆಸಿತು. ವಾಯು ವಿಹಾರಕ್ಕೆ ತೆರಳಿದ್ದ ರಮೇಶ್ ಅವರನ್ನು ವಶಕ್ಕೆ ಪಡೆದ ತಂಡ ಅವರು ವಾಸವಿರುವ ನಗರಸಭಾ ವಸತಿಗೃಹಕ್ಕೆ ಕರೆತಂದು ಮನೆಯನ್ನು ಜಾಲಾಡಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ಯಾರನ್ನೂ ಒಳಕ್ಕೆ ಬಿಡದೆ ಹಾಗೂ ಒಳಗಿದ್ದವರನ್ನು ಹೊರಕ್ಕೆ ಕಳುಹಿಸದೆ ಲೋಕಾಯುಕ್ತ ಪೊಲೀಸರು ಮನೆಯೊಳಗೆ ತೀವ್ರ ತಪಾಸಣೆ ನಡೆಸಿದರು.

ಈ ಸಂದರ್ಭ ಮನೆಯಲ್ಲಿ ೪೬೬೨೦೦ ರೂ. ನಗದು ಹಾಗೂ ೪೭೧೬೭೯೧ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಇರುವುದನ್ನು ದಾಖಲಿಸಿಕೊಂಡರು. ಅದರಲ್ಲಿ ೩೬೦.೨೨ ಗ್ರಾಂ ಚಿನ್ನ ಹಾಗೂ ೪೨೯.೩೧ ಗ್ರಾಂ. ಬೆಳ್ಳಿ ಪತ್ತೆಯಾದವು. ರಮೇಶ್ ಅವರಿಗೆ ಸೇರಿದ ವಾಹನಗಳ ಮೌಲ್ಯ ೨೦,೮೫,೦೦೦ ಎಂದು ಅಂದಾಜು ಮಾಡಿದ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ತಂಡ ಇತರ ವಸ್ತುಗಳ ಮೌಲ್ಯ ೬೮೦೫೦೦ ರೂ. ಎಂದು ದಾಖಲಿಸಿಕೊಂಡಿತು.

ರಮೇಶ್ ಅವರಿಗೆ ಸೇರಿದ ಕರ್ಣಂಗೇರಿಯ ಮೂರು ಎಕರೆ ಜಾಗಕ್ಕೆ ೯೦ ಲಕ್ಷ ರೂಪಾಯಿ ಮೌಲ್ಯವಿದ್ದು, ಅದನ್ನು ಲೆಕ್ಕಕೆ ಪರಿಗಣಿಸಲಾಯಿತು. ಮನೆಗಳ ಮೌಲ್ಯ ೧೦ ಲಕ್ಷ ಎಂದು ಲೋಕಾಯುಕ್ತ ಪೊಲೀಸರು ಪರಿಗಣನೆಗೆ ತೆಗೆದುಕೊಂಡರು.

ಆಯುಕ್ತರ ಒಟ್ಟು ಆಸ್ತಿಗಳ ಮೌಲ್ಯ ೧,೭೯,೪೮,೪೯೧ ಎಂದು ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ “ಶಕ್ತಿ''ಗೆ ತಿಳಿಸಿದ್ದಾರೆ. ಎಸ್‌ಪಿ ಉದೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ವೀಣಾ ನಾಯ್ಕ್, ಸುಧಾಕರ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.