ಬೆಂಗಳೂರು, ಸೆ. ೨೨: ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಮಾಡಬೇಡಿ, ಅನುದಾನದ ಕೊರತೆ ಇದೆ ಎಂದು ಹಣಕಾಸು ಇಲಾಖೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದೆ.
ಇಲಾಖೆಯಲ್ಲಿ ರೂ. ೨೭ ಸಾವಿರ ಕೋಟಿ ಅನುದಾನದ ಕೊರತೆಯಿದೆ. ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಪರಿಪೂರ್ಣಗೊಳಿಸಲು ಕಷ್ಟವಾಗುತ್ತಿದೆ. ರೂ. ೨ ಲಕ್ಷ ಕೋಟಿಗಿಂತ ಹೆಚ್ಚಿನ ಕಾಮಗಾರಿಗಳು ಬಾಕಿಯಿದೆ. ೪ ಇಲಾಖೆಗಳಿಂದ ೩೬,೧೩೬ ಕೋಟಿ ಬಿಲ್‌ಗಳು ಬಾಕಿಯಿದೆ. ಹಲವು ಇಲಾಖೆಗಳಲ್ಲಿ ಸಂಬಳಕ್ಕೂ ಹಣವಿಲ್ಲ. ಸಾರಿಗೆ ಇಲಾಖೆ, ಇಂಧನ ಇಲಾಖೆ ಸೇರಿದಂತೆ ನಿಗಮಗಳಲ್ಲೂ ಹಣದ ಕೊರತೆಯಿದೆ. ೨೦೨೬-೨೭ನೇ ಸಾಲಿನ ಬಜೆಟ್ ಘೋಷಣೆಗಳಿಗೆ ಸಂಪನ್ಮೂಲದ ಅಗತ್ಯವಿದೆ. ಆದ್ದರಿಂದ ಹೊಸದಾಗಿ ಯೋಜನೆಗಳನ್ನು ಘೋಷಿಸಿದರೆ ಅವುಗಳಿಗೆ ಒದಗಿಸಲು ಹಣವಿಲ್ಲ.
ಹಣಕಾಸಿನ ಮುಗ್ಗಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆಗಳ ಘೋಷಣೆ ಹಾಗೂ ವೆಚ್ಚದ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ವಾಸ್ತವಿಕ ನಿಲುವು ತಳೆಯುವಂತೆ ಹಣಕಾಸು ಇಲಾಖೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಹಣಕಾಸಿನ ಒತ್ತಡದಿಂದಾಗಿ ಸದ್ಯ ವೆಚ್ಚ ನಿರ್ವಹಣೆ, ವೇತನ ಪಾವತಿ ಮತ್ತು ಸಬ್ಸಿಡಿ ಪಾವತಿಗಳ ಮೇಲೂ ಪರಿಣಾಮ ಬೀರುತ್ತಿದೆ.
ಈ ಬಾರಿ ಕರ್ನಾಟಕದಲ್ಲಿ ಮುಂದುವರಿದಿರುವ ಮುಂಗಾರು ಕೊರತೆ ಮತ್ತು ಬರ ಪರಿಸ್ಥಿತಿಯಿಂದಾಗಿ ರೈತರಿಗೆ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರು ಪೂರೈಕೆಗೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ೪,೦೦೦-೫,೦೦೦ ಕೋಟಿ ರೂಪಾಯಿ ಹೊರೆ ಬೀಳುವ ಅಂದಾಜಿದೆ. ಹೆಚ್ಚುವರಿ ಯೋಜನೆಗಳಿಗೆ ಹಣ ಮಂಜೂರು ಮಾಡುವ ಮೊದಲು ಹೊಸ ಆದಾಯ ಮೂಲಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು ಎಂದು ಹಣಕಾಸು ಇಲಾಖೆ ಒತ್ತಿಹೇಳಿದೆ.
ಸತತವಾಗಿ ಹೊಸ ಯೋಜನೆಗಳನ್ನು ಘೋಷಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಣಕಾಸು ಇಲಾಖೆ ‘ವಾಸ್ತವಿಕವಾಗಿರಿ’ ಎಂದು ಸೂಚಿಸಿದ್ದು, ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಢೀಕರಿಸದೆ ಹೊಸ ಯೋಜನೆಗಳಿಗೆ ಹಣ ಒದಗಿಸುವುದು ಕಷ್ಟಕರವಾಗಲಿದೆ ಎಂದು ತಿಳಿಸಿದೆ.
ಲಭ್ಯವಿರುವ ಹಣಕಾಸಿನ ಮಿತಿಯ ಬಗ್ಗೆ ವಾಸ್ತವಿಕ ನಿಲುವು ತಳೆಯುವುದು ಸೂಕ್ತ ಎಂದು ಹಣಕಾಸು ಇಲಾಖೆ ಆಂತರಿಕ ಟಿಪ್ಪಣಿಯಲ್ಲಿ ತಿಳಿಸಿದೆ.
ಹೊಸ ಪ್ರಸ್ತಾವನೆಗಳಿಗೆ ಹಣ ಒದಗಿಸಲು ಇತರ ಇಲಾಖೆಗಳ ಅನುದಾನದಲ್ಲಿ ಕಡಿತ ಮಾಡಬೇಕಾಗುತ್ತದೆ. ಇದರಿಂದ ಇತರ ಕಾಮಗಾರಿಗಳು ವಿಳಂಬವಾಗಬಹುದು ಅಥವಾ ಸ್ಥಗಿತಗೊಳ್ಳಬಹುದು ಎಂದು ಹಣಕಾಸು ಇಲಾಖೆ ತಿಳಿಸಿದೆ.
೨೦೨೬-೨೭ನೇ ಸಾಲಿನ ಬಜೆಟ್ ಅಗತ್ಯಗಳನ್ನು ಪೂರೈಸಲು ಕರ್ನಾಟಕ ಈಗಾಗಲೇ ತನ್ನ ಸಾಲ ಪಡೆಯುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. ಹೀಗಾಗಿ ಯಾವುದೇ ಹೊಸ ಯೋಜನೆಗಳಿಗೆ ಹಣ ಒದಗಿಸಲು ರಾಜ್ಯಕ್ಕೆ ಮತ್ತಷ್ಟು ಸಾಲ ಪಡೆಯಲು ಅವಕಾಶವಿರುವುದಿಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ.