ಮದೆನಾಡು, ಸೆ. ೨೨: ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶೇಖರ್ ಅವರ ಅಧ್ಯಕ್ಷತೆಯಲ್ಲಿ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಶೇಖರ್ ಅವರು ಮಾತನಾಡಿ, ಮದೆ ಹಾಗೂ ಬೆಟ್ಟತ್ತೂರು ಗ್ರಾಮಗಳು ಕಸ್ತೂರಿ ರಂಗನ್ ವರದಿಯ ಕರಡು ಪಟ್ಟಿಗೆ ಸೇರಿರುವುದಾಗಿ ಮಾಹಿತಿ ನೀಡಿದರು. ಅಧಿಕಾರಿಗಳು ಕಸ್ತೂರಿ ರಂಗನ್ ವರದಿಯ ಸರಕಾರಿ ಸುತ್ತೋಲೆ ಇಲ್ಲದೆ ಬಂದಿರುವುದರ ಬಗ್ಗೆ ಕೆಲ ಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಉಪ ವಲಯ ಅರಣ್ಯ ಅಧಿಕಾರಿ ಸುನಿಲ್ ಅವರು ಮಾತನಾಡಿದರು. ನಂತರ ಗ್ರಾಮಸ್ಥರು ಕಸವಿಲೇವಾರಿ, ಹಾಗು ಗ್ರಾಮದ ನೀರಿನ ಸಮಸ್ಯೆ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಳಿ ಕ್ರಮಕೈಗೊಳ್ಳಲು ಮನವಿ ಮಾಡಿದರು.

ಸಭೆಯ ಕೊನೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯಲು ವಿವಿಧ ಸಂಘಟನೆಗಳ ಪ್ರಮುಖರು, ದೇವಸ್ಥಾನ ಸಮಿತಿ, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು/ಸದಸ್ಯರು ಒಟ್ಟಾಗಿ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮದೆನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ, ಕಂದಾಯ ಪರಿವೀಕ್ಷಕರಾದ ವೆಂಕಟೇಶ್, ಗ್ರಾಮ ಲೆಕ್ಕಾಧಿಕಾರಿ ಪ್ರವೀಣ್, ನಿತಿನ್, ಮತ್ತಿತರರು ಹಾಜರಿದ್ದರು.

ಚೆಟ್ಟಳ್ಳಿ: ಸೆ. ೨೨: ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳನ್ನು ಒಗ್ಗೂಡಿಸಿ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಕುರಿತು ವಿಶೇಷ ಗ್ರಾಮ ಸಭೆಯನ್ನು ಗರ್ವಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಭೆಯು ಸೋಮವಾರಪೇಟೆ ತಾಲೂಕಿನ ನೋಡಲ್ ಅಧಿಕಾರಿ ಎ.ಇ.ಇ ನಾರಾಯಣಮೂರ್ತಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಅವರ ಸಮ್ಮುಖದಲ್ಲಿ ನಡೆಯಿತು.

ಸಭೆಯಲ್ಲಿ ಮೊದಲಿಗೆ ಕಸ್ತೂರಿ ರಂಗನ್ ವರದಿಯ ವಿಷಯವನ್ನು ಪ್ರಸ್ತಾಪಿಸಲಾಯಿತು. ಈ ವೇಳೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಊರುಗಳ ಪ್ರಮುಖರು ವರದಿಯಲ್ಲಿರುವ ಲೋಪದೋಷಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.

ವರದಿಯನ್ನು ಈಗಿರುವ ರೂಪದಲ್ಲೇ ಅನುಷ್ಠಾನಗೊಳಿಸಿದಲ್ಲಿ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಅರಣ್ಯ ಇಲಾಖೆಯಿಂದ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಮನೆ ನಿರ್ಮಾಣ, ಕೃಷಿ ಚಟುವಟಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಡಚಣೆಯಾಗುತ್ತದೆ.

ಒಂದು ವೇಳೆ ವರದಿ ಜಾರಿಯಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಲಾಯಿತು.

ವರದಿಯಲ್ಲಿರುವ ಲೋಪದೋಷ ಸರಿಪಡಿಸಲು ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಆಯಾ ಊರಿನ ಗ್ರಾಮ ಸಮಿತಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಿ, ಭೌತಿಕ ಸಮೀಕ್ಷೆ ನಡೆಸಬೇಕು. ಯಾವುದು ಅರಣ್ಯ ಪ್ರದೇಶ, ಯಾವುದು ಜನವಸತಿ ಪ್ರದೇಶ, ಯಾವುದು ಕೃಷಿ ಭೂಮಿ ಎಂಬುದನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗುರುತಿಸಿ, ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರು, ನಾಡಿನ ಪ್ರಮುಖರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸೋಮವಾರಪೇಟೆ, ಸೆ. ೨೨: ಕಸ್ತೂರಿ ರಂಗನ್ ವರದಿ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ೭ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ, ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ನಿವಾಸಿಗಳು ತಮ್ಮ ತಕರಾರು ಅರ್ಜಿಯನ್ನು ಸಲ್ಲಿಸಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮಸಭೆ ಶ್ರೀ ನವದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಶ್ರೀದೇವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಮಾತನಾಡಿ, ನೂರಾರು ವರ್ಷಗಳಿಂದ ಕೃಷಿಕರು ಪರಿಸರವನ್ನು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ರೈತರು ಆಮ್ಲಜನಕ ಉತ್ಪಾದಕರು ಎಂದರು.

ಕೊಡಗಿನ ಪಶ್ಚಿಮಘಟ್ಟ ಸರಹದ್ದು, ಮೀಸಲು ಅರಣ್ಯಗಳ ವ್ಯಾಪ್ತಿಯ ಪರಿಮಿತಿಯನ್ನು ಮಾತ್ರ ಸೂಕ್ಷö್ಮ ಪರಿಸರ ವಲಯ ಎಂದು ಗುರುತು ಮಾಡಿದರೆ, ಎಲ್ಲಾ ರೈತರು ಸಂಪೂರ್ಣ ಸಹಕಾರ ನೀಡುತ್ತೇವೆ. ಇವತ್ತಿಗೂ ಮೀಸಲು ಅರಣ್ಯದ ಕಾನೂನನ್ನು ರೈತಾಪಿ ವರ್ಗ ಪಾಲಿಸುತ್ತ ಬಂದಿದ್ದಾರೆ. ಆದರೆ ಹಸಿರು ಇರುವ ಕಾಫಿ ತೋಟ ಮತ್ತು ಕೃಷಿ ಭೂಮಿಯನ್ನು ಸೂಕ್ಷö್ಮ ಪರಿಸರ ವಲಯ ವ್ಯಾಪ್ತಿಯೊಳಗೆ ಸೇರ್ಪಡೆ ಮಾಡುವ ಪ್ರಯತ್ನಕ್ಕೆ ಮುಂದಾದರೆ, ರೈತರು ಯಾವುದೇ ತ್ಯಾಗಕ್ಕೂ ಸಿದ್ದರಿದ್ದೇವೆ ಎಂದು ಎಚ್ಚರಿಸಿದರು.

ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಮಾತನಾಡಿ, ಅರಣ್ಯ ಪ್ರದೇಶದಿಂದ ಆಕಾಶ ಮಾರ್ಗದಲ್ಲಿ ಒಂದು ಕಿ.ಮೀ ವ್ಯಾಪ್ತಿಯೊಳಗೆ ಸೂಕ್ಷö್ಮ ಪರಿಸರ ವಲಯ ಎಂದು ಘೋಷಣೆಯಾದರೆ, ಭೂ ಮಾರ್ಗದಲ್ಲಿ ಮೂರು ಕಿ.ಮೀ.ಗೆ ವ್ಯಾಪ್ತಿಸುತ್ತದೆ. ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮಗಳ ಸನಿಹದಲ್ಲೇ ನಿಡ್ತ, ಮಾಲಂಬಿ ಮೀಸಲು ಅರಣ್ಯಗಳಿವೆ. ಪಂಚಾಯಿತಿಯ ಎಲ್ಲಾ ಗ್ರಾಮಗಳು ಸೂಕ್ಷö್ಮ ಪರಿಸರ ವಲಯ ವ್ಯಾಪ್ತಿಗೆ ಬರುತ್ತದೆ. ರೈತರು ಗ್ರಾಮಗಳನ್ನು ತೊರೆದು, ಕೃಷಿಯನ್ನು ಕೈಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೊಗಪ್ಪ, ಶರಣ್, ಸುನಿಲ್, ಕೋಟೆಯೂರು ಲೋಕೇಶ್, ಮಹೇಂದ್ರ, ಮೋಹನ್, ಜಯಪ್ಪ, ರಾಜಪ್ಪ, ಪ್ರಸಿ, ವೆಂಕಟೇಶ್, ಬೋಜಪ್ಪ, ದೇವರಾಜ್, ವಸಂತ್, ಪ್ರದೀಪ್ ಮತ್ತಿತರು ಅನುಷ್ಠಾನಕ್ಕೆ ತಕರಾರು ಸಲ್ಲಿಸಿ, ಊರುಡುವೆ, ದೇವರಕಾಡು, ಹುಲ್ಲುಗಾವಲು ಎಲ್ಲವನ್ನು ಗ್ರಾಮದ ಹೆಸರಿಗೆ ಆರ್‌ಟಿಸಿ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ನೋಡೆಲ್ ಅಧಿಕಾರಿ ರಾಜಶೇಖರ್ ಮಾತನಾಡಿ, ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ರೈತರು ತಕರಾರು ಸಲ್ಲಿಸಿದ್ದು, ಸಭೆಯ ನಿರ್ಣಯವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ಪಿಡಿಒ ಚಿನ್ನಸ್ವಾಮಿ ಇದ್ದರು.

ಐಗೂರು, ಸೆ. ೨೨: ಕಸ್ತೂರಿ ರಂಗನ್ ವರದಿ ಸಂಬAಧಿಸಿದAತೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಗ್ರಾಮಸಭೆ ಐಗೂರಿನ ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆಯಿತು. ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಐಗೂರು ಗ್ರಾಮ ಪಂಚಾಯಿತಿ ಪಿಡಿಒ ಪೂರ್ಣ ಕುಮಾರ್ ಕರಡು ಅಧಿಸೂಚನೆ ವರದಿಯನ್ನು ಸಭೆಗೆ ವಿವರಿಸಿದರು. ಗ್ರಾಮದ ಮಾಜಿ ಪಂಚಾಯತಿ ಸದಸ್ಯರು ಮತ್ತು ರೈತ ಹೋರಾಟಗಾರರು ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಮಡಿಕೇರಿ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದ ಮೇರೆಗೆ ೭ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಐಗೂರು ಗ್ರಾಮಸ್ಥರು ಸಭೆಯಲ್ಲಿ ಒಮ್ಮತದ ನಿಲುವು ತೆಗೆದುಕೊಳ್ಳಲಾಯಿತು.

ಕೇಂದ್ರ ಪರಿಸರ ಸಚಿವಾಲಯವು ಹೊರಡಿಸಿರುವ ಕಸ್ತೂರಿರಂಗನ್ ವರದಿ ಆಧಾರಿತ ೭ನೇ ಕರಡು ಅಧಿ ಸೂಚನೆಯಲ್ಲಿ ಜಿಲ್ಲೆಯ ಒಟ್ಟು ೫೩ ಗ್ರಾಮಗಳನ್ನು ಪರಿಸರ ಸೂಕ್ಷö್ಮ ಪ್ರದೇಶ ಎಂದು ಗುರುತಿಸಲಾಗಿದ್ದು , ಕಸ್ತೂರಿರಂಗನ್ ವರದಿಯಲ್ಲಿ ಉಲ್ಲೇಖವಾಗಿರುವ ಗ್ರಾಮಗಳು ಮಾತ್ರವಲ್ಲ, ವರದಿಯ ಜಾರಿಯಿಂದ ಇಡೀ ಕೊಡಗು ಜಿಲ್ಲೆಗೆ ಸಮಸ್ಯೆ ಎದುರಾಗಲಿದೆ ಎಂಬ ವಿಷಯವನ್ನು ರೈತ ಹೋರಾಟಗಾರರಾದ ಕೆ.ಸಿ. ಮೋಹನ್, ಮಚ್ಚಂಡ ಅಶೋಕ್, ಕೆ.ಪಿ. ಮುತ್ತಪ್ಪ ರಮೇಶ್ ಮತ್ತು ಆದರ್ಶ್ ಸಭೆಯಲ್ಲಿದ್ದವರಿಗೆ ಮನವರಿಕೆ ಮಾಡಿದರು.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದ ೧೦೫೪.೫೫ ಎಕರೆ ವ್ಯಾಪ್ತಿಯನ್ನು ಪರಿಸರ ಸೂಕ್ಷö್ಮ ವಲಯವೆಂದು ಗುರುತಿಸಲಾಗಿದೆೆ. ಐಗೂರು ಗ್ರಾಮ ಪಂಚಾಯಿತಿಯ ಯಡವನಾಡು ಗ್ರಾಮದ ಸರ್ವೇ ನಂಬರ್ ೧ ರಿಂದ ೩೪೭ ರವರೆಗಿನ ಪ್ರದೇಶವನ್ನು ಪರಿಸರ ಸೂಕ್ಷö್ಮ ವಲಯವೆಂದು ಘೋಷಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಯಾವುದೇ ಪ್ರದೇಶವನ್ನು ಸೂಕ್ಷö್ಮ ವಲಯವೆಂದು ಗುರುತಿಸುವ ಮೊದಲು ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಬೇಕಿತ್ತು. ಮತ್ತು ರೈತರ ಮನೆಗಳು, ಕಾಮಗಾರಿ, ರೈತರ ಕೃಷಿ ಚಟುವಟಿಕೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯಾವುದೇ ನಿರ್ಬಂಧ ವಿಧಿಸಬಾರದು. ಯಾವುದೇ ಕರಡು ಅಧಿಸೂಚನೆ ಹೊರಡಿಸಲು ಗ್ರಾಮ ಪಂಚಾಯಿತಿಯಿAದ ಆಕ್ಷೇಪಣೆ ಇರುತ್ತದೆ ಎಂದು ವಿಶೇಷ ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗ್ರಾಮಸ್ಥರು ಸಭೆಯಲ್ಲಿ ಠರಾವು ಮಂಡಿಸಿ, ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಬAಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಿ ತಕಾರರು ಅರ್ಜಿಗೆ ಗ್ರಾಮಸ್ಥರೆಲ್ಲರೂ ಸಹಿ ಹಾಕಿದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಿತ್ಯ ಪ್ರಾರ್ಥಿಸಿ ವಂದಿಸಿದರು. ಐಗೂರು ವ್ಯಾಪ್ತಿಯ ರೈತ ಹೋರಾಟಗಾರರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಗೆ ಒಕ್ಕೊರಲಿನ ವಿರೋಧ ವ್ಯಕ್ತವಾಯಿತು. ಕೊನೆಗೆ ರಾಷ್ಟçಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.ಸೋಮವಾರಪೇಟೆ, ಸೆ. ೨೨: ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ೭ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಆಡಳಿತಾಧಿಕಾರಿ ಲಿಖಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಜನರ ಮೇಲೆ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ಗಣಗೂರಿನ ಚಂದ್ರಶೇಖರ್ ಮಾತನಾಡಿ, ನೂರಾರು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಕೃಷಿ ಮಾಡಿಕೊಂಡು ಸಾವಿರಾರು ಕುಟುಂಬಗಳು ನೆಲೆ ಕಂಡುಕೊAಡಿವೆ. ಏಕಾಏಕಿ ಕಸ್ತೂರಿ ರಂಗನ್ ವರದಿ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು. ಶೂನ್ಯ ಮಾರ್ಜಿನ್ ಆಧಾರದಲ್ಲಿ ವರದಿ ಅನುಷ್ಠಾನಗೊಳಿಸಿದಲ್ಲಿ ಗ್ರಾಮಸ್ಥರು ಸಹಕಾರ ನೀಡಲಿದ್ದಾರೆ ಎಂದರು.

ಶಿವದಾಸ್ ಮಾತನಾಡಿ, ಅಧಿಕಾರಿಗಳು ಸ್ಥಳೀಯ ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳಬಾರದು. ಕಸ್ತೂರಿ ರಂಗನ್ ವರದಿಯನ್ನು ಎಲ್ಲರೂ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ನಮ್ಮ ಭೂಮಿಯಲ್ಲಿ ಮರ-ಗಿಡಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದೇವೆ. ಅಧಿಕಾರಿಗಳು ವರದಿಯನ್ನು ವಸ್ತುನಿಷ್ಠವಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ರೈತ ಅನಂತರಾಮ್ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಮಾಹಿತಿ ಸಂಗ್ರಹಿಸುವ ಬದಲು ರೈತರ ಬಳಿಗೆ ತೆರಳಿ ಸಮೀಕ್ಷೆ ನಡೆಸಬೇಕು. ಗೂಗಲ್ ಸರ್ವೆ ಬಿಟ್ಟು ಸ್ಥಳೀಯವಾಗಿ ನೇರ ಸಮೀಕ್ಷೆ ನಡೆಸಿ, ರೈತರಿಂದ ನಿಖರ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿದರು.

ನಂತರ ಸಭೆಯನ್ನು ಉದ್ದೇಶಿಸಿ ಆಡಳಿತಾಧಿಕಾರಿ ಲಿಖಿತಾ ಮಾತನಾಡಿ, ಮುಂದಿನ ತಿಂಗಳಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ರೈತರ ಸಭೆ ಕರೆಯಲಾಗುವುದು. ರೈತರು ಸಭೆಗೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು. ೭ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಗ್ರಾಮಸ್ಥರು ಕೈಗೊಂಡಿರುವ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಗಣಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರು, ಯರಪಾರೆ, ಬಾಣಾವಾರ, ಆಡಿನಾಡೂರು, ಸಂಗಯ್ಯನಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.