ಸಿದ್ದಾಪುರ, ಸೆ. ೨೧: ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ಕರಡಿಗೋಡು ಗ್ರಾಮಸ್ಥರು ಒಕ್ಕೊರಲಿನಿಂದ ನಿರ್ಣಯ ಕೈಗೊಂಡರು. ಕಸ್ತೂರಿರಂಗನ್ ಕರಡು ಅಧಿಸೂಚನೆಯಲ್ಲಿ ಸಿದ್ದಾಪುರದ ಕರಡಿಗೋಡು ಗ್ರಾಮವನ್ನು ಸೇರ್ಪಡೆಗೊಳಿಸಲಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಸೋಮವಾರದಂದು ಕರಡಿಗೋಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ವತಿಯಿಂದ ವಿಶೇಷ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಪಿ.ಸಿ. ಜನೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಗ್ರಾಮ ಸಭೆಯನ್ನು ಉದ್ದೇಶಿಸಿ ಕರಡಿಗೋಡು ಗ್ರಾಮದ ನಿವಾಸಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಅಮ್ಮತಿ ಹೋಬಳಿ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಮಾತನಾಡಿ, ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆಯನ್ನು ಗ್ರಾಮಸ್ಥರು ಎಲ್ಲರೂ ಸೇರಿ ವಿರೋಧ ವ್ಯಕ್ತಪಡಿಸುತ್ತೇವೆ. ಈ ವರದಿ ಗ್ರಾಮಕ್ಕೆ ಮಾರಕವಾಗುತ್ತದೆ ಎಂದರು.

ಈಗಾಗಲೇ ಕರಡಿಗೋಡು ಗ್ರಾಮವು ವನ್ಯಪ್ರಾಣಿಗಳ ಹಾವಳಿಯಿಂದ ಹಾಗೂ ಈ ಹಿಂದೆ ಪ್ರವಾಹಕ್ಕೆ ಸಿಲುಕಿ ತತ್ತರಿಸಿದೆ. ಇದರ ಬೆನ್ನಲ್ಲೇ ಇದೀಗ ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆಯನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯ ೫೩ ಗ್ರಾಮಗಳನ್ನು ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಗೆ ಸೇರ್ಪಡೆಗೊಳಿಸಿದ್ದು ಇದೀಗ ಕರಡಿಗೋಡು ಗ್ರಾಮವನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಪಶ್ಚಿಮಘಟ್ಟ ಸಂರಕ್ಷಣೆಯ ಕುರಿತಂತೆ ಹೊರಡಿಸಲಾಗಿರುವ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಯಿಂದ ರೈತರಿಗೆ, ಜನಸಾಮಾನ್ಯರಿಗೆ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಕರಡಿಗೋಡು ಗ್ರಾಮವನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದರು.

ಗ್ರಾಮಸ್ಥರ ವಿರೋಧ ಹಾಗೂ ನಿರ್ಣಯದ ವರದಿಯನ್ನು ಗ್ರಾಮ ಪಂಚಾಯಿತಿಯವರು ಚಿತ್ರದೊಂದಿಗೆ ವೀಡಿಯೋ ಮಾಡಿ ಸರಕಾರಕ್ಕೆ, ರಾಜ್ಯದ ಮುಖ್ಯಮಂತ್ರಿಗಳಿಗೆ ತಕ್ಷಣವೇ ಕಳುಹಿಸುವಂತೆ ಅವರು ಮನವಿ ಮಾಡಿದರು. ಜಿಲ್ಲಾ ತೋಟ ಕಾರ್ಮಿಕ ಸಂಘಟನೆ ಅಧ್ಯಕ್ಷ ಎನ್.ಡಿ. ಕುಟ್ಟಪ್ಪನ್ ಮಾತನಾಡಿ, ಪಶ್ಚಿಮಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕಸ್ತೂರಿರಂಗನ್ ವರದಿ ಜಾರಿಗೆ ತರುವುದು ಸರಿಯಾದ ಕ್ರಮವಲ್ಲ. ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆ ವಿರುದ್ಧ ಜಿಲ್ಲೆಯ ೫೩ ಗ್ರಾಮಗಳ ಗ್ರಾಮಸ್ಥರು ಸಂಘಟಿತರಾಗಿ ಹೋರಾಟವನ್ನು ಮಾಡಬೇಕೆಂದು ಕರೆ ನೀಡಿದರು.

ಕಸ್ತೂರಿರಂಗನ್ ವರದಿ ಜಾರಿಯಾದಲ್ಲಿ ಕಾರ್ಮಿಕರಿಗೂ ಕೂಡ ಕೆಲಸ ಮಾಡಲು ಹಲವಾರು ತೊಡಕುಗಳು ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಎ. ಯಮುನ ಮಾತನಾಡಿ, ಕಸ್ತೂರಿರಂಗನ್ ವರದಿಯ ಸಾಧಕ ಬಾಧಕಗಳನ್ನು ಜನಪ್ರತಿನಿಧಿಗಳು ಜನರಿಗೆ ತಿಳಿಸುವಂತಾಗಬೇಕು. ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಕಸ್ತೂರಿರಂಗನ್ ವರದಿಯ ವಿರುದ್ಧ ರಾಜಕೀಯ ರಹಿತವಾಗಿ, ಜಾತಿ, ಮತ ಭೇದವಿಲ್ಲದೆ ಹೋರಾಟ ಮಾಡಬೇಕೆಂದು ಕರೆ ನೀಡಿದರು.

ಕಾರ್ಮಿಕ ಮುಖಂಡ ಹೆಚ್.ಬಿ. ರಮೇಶ್ ಮಾತನಾಡಿ, ಕಸ್ತೂರಿರಂಗನ್ ವರದಿ ವಿಚಾರ ಗಂಭೀರವಾಗಿದ್ದು, ಇದರಿಂದಾಗಿ ಹಲವಾರು ತೊಡಕುಗಳು ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಸ್ತೂರಿರಂಗನ್ ವರದಿಯನ್ನು ತಿರಸ್ಕೃತಗೊಳಿಸಲು ಸಾಧ್ಯವಿಲ್ಲ. ಆದರೆ ಅದನ್ನು ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕೆಂದ ಅವರು, ಜನವಸತಿ ಪ್ರದೇಶಗಳನ್ನು ವರದಿಯಿಂದ ಕೈಬಿಡಬೇಕೆಂದು ಒತ್ತಾಯಿಸಿದರು.

ಗ್ರಾಮ ಸಭೆಗೆ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಪೊನ್ನಂಪೇಟೆ ತಾಲೂಕು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಎಂ.ಕೆ. ದೀನ ಮಾತನಾಡಿ, ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆಯಲ್ಲಿ ಸಿದ್ದಾಪುರದ ಕರಡಿಗೋಡು ಗ್ರಾಮವನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ನಿರ್ಣಯವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಗ್ರಾಮಸ್ಥ ಮಂಜುನಾಥ್ ಸೇರಿದಂತೆ ಇನ್ನಿತರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿ ಹಾಗೂ ವೀರಾಜಪೇಟೆ ತಾಲೂಕು, ಭೂ ದಾಖಲೆಗಳ ಉಪನಿರ್ದೇಶಕ ಪಿ.ಸಿ. ಜನೇಶ್ ಕುಮಾರ್, ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್, ಕಾರ್ಯದರ್ಶಿ ನಿತಿನ್, ಕರಡಿಗೋಡು ಗ್ರಾಮದ ಪ್ರಮುಖರಾದ ಎಂ.ವಿ. ಸಜೀವನ್, ಎಸ್.ಬಿ. ಪ್ರತೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ವೆAಟೇಶ್, ಕರಡಿಗೋಡು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ತ್ರಿವೇಣಿ, ಗ್ರಾಮಸ್ಥರಾದ ಬೈಜು, ಕುಕ್ಕನೂರು ಮೋಹನ್, ಸೂದನ ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು. - ವಾಸು