ಕುಶಾಲನಗರ, ಸೆ. ೨೧: ಕುಶಾಲನಗರ ಸಮೀಪ ಆನೆಕಾಡು ಬಳಿ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ನಡೆದ ಸರಣಿ ಅಪಘಾತದಲ್ಲಿ ಗಾಯಗೊಂಡ ಏಳು ಜನರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಅಪಘಾತಕ್ಕೆ ಒಳಗಾದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೊಡಗರಹಳ್ಳಿಯ ನಿಶಾಂತ್ (೧೮) ಮತ್ತು ಅಖಿಲ್ (೧೮) ಅವರು ಮೈಸೂರಿನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇನ್ನುಳಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಜಯ್ (೨೫) ಮಡಿಕೇರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಂದ್ರಶೇಖರ್ (೨೫) ಸುಬೀನ್ (೨೬) ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತಕ್ಕೆ ಒಳಗಾದ ಪಿಕ್ ಅಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಧು ಮತ್ತು ನಿವೇದ್ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಣಿ ಅಪಘಾತದಲ್ಲಿ ಮೃತಪಟ್ಟ ಮೂರ್ನಾಡು ನಿವಾಸಿ ಕುಮಾರ, ಹೊಸಕೋಟೆಯ ಆದರ್ಶ್ ಮತ್ತು ರತನ್ ಉಣ್ಣಿ ಅವರುಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಹೊಸಕೋಟೆ ಕಡೆಯಿಂದ ಕುಶಾಲನಗರ ಕಡೆಗೆ ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರು ಈ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ವೇಗವಾಗಿ ಬಂದು ಕುಶಾಲನಗರ ಕಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಇದೇ ಸಂದರ್ಭ ಬೈಕ್ ಹಿಂಭಾಗದಲ್ಲಿ ಕುಶಾಲನಗರ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನ ಕಾರ್‌ಗೆ ಅಪ್ಪಳಿಸಿದ್ದು ಕಾರಿನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕುಶಾಲನಗರ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಭಾನುವಾರ ರಾತ್ರಿ ದುರ್ಘಟನೆ ನಡೆದ ಸಂದರ್ಭ ತೀವ್ರ ಗಾಯಗೊಂಡ ಗಾಯಾಳುಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆ ತಂದ ವೇಳೆ ವೈದ್ಯರ ಅಲಭ್ಯತೆಯಿಂದ ಗಾಯಾಳುಗಳು ಪರದಾಡುವಂತಾಯಿತು. ಸೋಮವಾರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ಕೂಡ ವಿಳಂಬ ಮಾಡಲಾಯಿತು.
ಓರ್ವ ಗಾಯಾಳು ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ ಮೃತಪಟ್ಟ ಹಿನ್ನೆಲೆಯಲ್ಲಿ ಹುಣಸೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು ಅಲ್ಲಿನ ವೈದ್ಯರು ಕೂಡಲೇ ಸ್ಪಂದಿಸಿದ್ದಾರೆ ಎಂದು ತಿಳಿಸಿರುವ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ರಮೇಶ್, ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ೧೧ ಗಂಟೆ ಕಳೆದರೂ ವೈದ್ಯರ ವಿಳಂಬ ನೀತಿಯ ಬಗ್ಗೆ ಹಾಗೂ ಲೋಪದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.