ಮುಳ್ಳೂರು, ಸೆ. ೨೧: ಆಲೂರು-ಸಿದ್ದಾಪುರ ಗ್ರಾ.ಪಂ. ಆವರಣದಲ್ಲಿ ಗ್ರಾ.ಪಂ. ನೋಡಲ್ ಅಧಿಕಾರಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕ ರಾಕೇಶ್ ಅಧ್ಯಕ್ಷತೆಯಲ್ಲಿ ಕಸ್ತೂರಿರಂಗನ್ ವರದಿಯ ಸಾಧಕ ಬಾಧಕಗಳ ಬಗ್ಗೆ ರೈತರು ಮತ್ತು ಗ್ರಾಮಸ್ಥರ ವಿಶೇಷ ಗ್ರಾಮಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡ ರೈತರು ಕಸ್ತೂರಿರಂಗನ್ ವರದಿಯಿಂದ ನಮ್ಮ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಸಮಸ್ಯೆ ಆಗುವುದರಿಂದ ವರದಿಯನ್ನು ತಿರಸ್ಕರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾ.ಪಂ.ವ್ಯಾಪ್ತಿಯ ರೈತರು ಮತ್ತು ಗ್ರಾಮಸ್ಥರ ಪರವಾಗಿ ವಿರೋಧ ವ್ಯಕ್ತಪಡಿಸಿದ ಗ್ರಾ.ಪಂ. ಮಾಜಿ ಸದಸ್ಯ ಹೆಚ್.ಎಸ್. ಪ್ರೇಮ್‌ನಾಥ್, ಕಸ್ತೂರಿರಂಗನ್ ವರದಿಯಲ್ಲಿರುವ ನಿಯಮಗಳಿಂದ ನಮ್ಮ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ಪ್ರತಿಯೊಬ್ಬ ಗ್ರಾಮಸ್ಥ ಮತ್ತು ರೈತನಿಗೆ ತೊಂದರೆಯಾಗಲಿದೆ. ಈ ಹಿನ್ನಲೆಯಲ್ಲಿ ವರದಿಯನ್ನು ತಿರಸ್ಕರಿಸಬೇಕು ಮತ್ತು ಅಧಿಕಾರಿಗಳು ಸಭೆಯಲ್ಲಿ ಜನರಿಂದ ವ್ಯಕ್ತವಾದ ಅಭಿಪ್ರಾಯವನ್ನು ಸರಕಾರಕ್ಕೆ ತಲುಪಿಸಬೇಕು ಎಂದು ಮನವಿ ಮಾಡಿದರು. ಚರ್ಚೆ ನಂತರ ಸಭೆಯಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರು ಮತ್ತು ಸಾರ್ವಜನಿಕರಿಂದ ಕಸ್ತೂರಿರಂಗನ್ ವರದಿಗೆ ಆಕ್ಷೇಪ ವ್ಯಕ್ತವಾಗಿರುವ ಕುರಿತು ಅಧಿಕಾರಿಗಳು ನಿರ್ಣಯ ತೆಗೆದುಕೊಂಡರು. ನಿರ್ಣಯದ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದಾಗಿ ನೋಡಲ್ ಅಧಿಕಾರಿ ರಾಕೇಶ್ ತಿಳಿಸಿದರು
ಈ ಸಂದರ್ಭ ಗ್ರಾ.ಪಂ. ಪಿಡಿಓ ಚಂದ್ರಶೇಖರ್ ಗ್ರಾ.ಪಂ.ಕಾರ್ಯದರ್ಶಿ ಧರ್ಮಪ್ಪ ಮತ್ತು ಸಿಬ್ಬಂದಿ ಇದ್ದರು.