ಶನಿವಾರಸಂತೆ, ಸೆ. ೨೦: ಸಹಕಾರಿ ಸದಸ್ಯರು ಸಕಾಲದಲ್ಲಿ ಸಂಘದಲ್ಲಿ ಮಾಡಿರುವ ಸಾಲವನ್ನು ಮರು ಪಾವತಿಸುವುದರಿಂದ ಸಂಘವು ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ್ ಅಭಿಪ್ರಾಯಪಟ್ಟರು. ಸಂಘದ ಸಭಾಂಗಣದಲ್ಲಿ ಸದರಿ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಈ ಸಾಲಿನಲ್ಲಿ ೧೪ ಲಕ್ಷದ ೩೪ ಸಾವಿರದ ೪೬೨ ರೂಪಾಯಿನಷ್ಟು ನಿವ್ವಳ ಲಾಭಗಳಿಸಿದೆ. ಈ ಮೂಲಕ ಕಳೆದ ಸಾಲಿಗಿಂತ ಹೆಚ್ಚಿನ ಲಾಭಗಳಿಸಿದ್ದು, ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭ ತಂದುಕೊಡಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸಪ್ಪ ಸದರಿ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಇದೆ ಸಂದರ್ಭ ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘ ಬೆಳವಣಿಗೆ ಮತ್ತು ಸಹಕಾರಿ ಸದಸ್ಯರಿಗೆ ಉಪಯೋಗಕ್ಕೆ ಪೂರಕವಾಗಿ ಚರ್ಚಿಸಲಾಯಿತು. ಸಂಘದ ಹಿರಿಯ ಸಹಕಾರಿ ಸದಸ್ಯರಾದ ರವಿ ಕುಮಾರ್, ನಿರಂಜನ್, ಶಿವಾನಂದ್, ಬಸವರಾಜ್, ನಾಗೇಶ್ ಮುಂತಾದ ಸಹಕಾರಿಗಳು ಸಭೆಯಲ್ಲಿ ಚರ್ಚಿಸಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಯಶವಂತ, ಆಡಳಿತ ಮಂಡಳಿಯ ನಿರ್ದೇಶಕರಾದ ವೀರೇಂದ್ರ ಕುಮಾರ್, ಸಂದೀಪ್, ಮದು, ರಮೇಶ್, ವಿಶಾಲಾಕ್ಷಿ, ಕೆ.ಎನ್. ಮದುರ, ಮೋಹನ್, ರವೀಶ್, ದೇವರಾಜು, ಕೆಡಿಸಿಸಿ ಬ್ಯಾಂಕ್‌ಪರ ಮೇಲ್ವಿಚಾರಕರಾದ ಆರ್. ಅನುರಾಧಾ, ಮುತ್ತುರಾಜ್, ಸಂಘದ ಹಿರಿಯ ಗುಮಸ್ತೆ ಶೋಭಾ, ಕಿರಿಯ ಗುಮಸ್ತ ಹುಸೈನಾರ್, ಮಾರಾಟ ಗುಮಸ್ತ ಕೆ.ಎಸ್. ಸಂತೋಷ್, ಸೋಮಶೇಖರ್ ಮುಂತಾದವರು ಹಾಜರಿದ್ದರು.