ಪೊನ್ನಂಪೇಟೆ, ಸೆ.೨೦: ಸಾಮಾಜಿಕ ಸುಧಾರಣೆಯಲ್ಲಿ ಶ್ರೀ ನಾರಾಯಣ ಗುರುಗಳ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಅಸ್ಪೃಶ್ಯತೆ, ಜಾತಿ-ಮತಗಳ ನಡುವಿನ ಭೇದಭಾವ ಹಾಗೂ ಶೋಷಣೆಯಿಂದ ಕೂಡಿದ್ದ ಕೇರಳವನ್ನು ‘ದೇವರ ನಾಡು’ ಎಂದು ಕರೆಯುವ ಮಟ್ಟಕ್ಕೆ ಪರಿವರ್ತಿಸುವಲ್ಲಿ ಶ್ರೀ ನಾರಾಯಣ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಹೇಳಿದರು.
ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರದಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಶಾಖಾ ಯೋಗಂ, ಗೋಣಿಕೊಪ್ಪ ಹಾಗೂ ಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ೧೭೨ನೇ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಎಸ್ಎನ್ಡಿಪಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಡುವಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಅವರ ಕೊಡುಗೆಯನ್ನು ಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿಯೂ ಸಮುದಾಯದ ಅಭಿವೃದ್ಧಿಗೆ ಶಾಸಕ ಪೊನ್ನಣ್ಣ ಅವರೊಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಪಿ.ಆರ್. ಸುರೇಂದ್ರ ಮಾತನಾಡಿದರು. ಮೋನಿಷಾ ನಾರಾಯಣ್ ತಂಡದ ಸ್ವಾಗತ ನೃತ್ಯ ಹಾಗೂ ಸಪ್ತಾಶ್ರೀ ತಂಡದ ತಿರುವಾದಿರ ನೃತ್ಯ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಎಸ್ಎನ್ಡಿಪಿ ಯೂನಿಯನ್ ಕೊಡಗು ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು ೧೫ ಸಾವಿರ ನೋಂದಾಯಿತ ಸದಸ್ಯರನ್ನು ಹೊಂದಿರುವ ಎಸ್ಎನ್ಡಿಪಿ ಬೃಹತ್ ಸಾಮಾಜಿಕ ಸಂಘಟನೆಯಾಗಿದೆ. ವಿಶ್ವಗುರು ಶ್ರೀ ನಾರಾಯಣ ಗುರುಗಳು ೧೯೦೩ರಲ್ಲಿ ಸ್ಥಾಪಿಸಿದ ಈ ಸಂಘಟನೆ ಇಂದು ವಿಶ್ವದಾದ್ಯಂತ ಸುಮಾರು ೩೬ ಲಕ್ಷ ಸದಸ್ಯರು ಹಾಗೂ ಸಾವಿರಾರು ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು.
ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಶ್ರೀ ನಾರಾಯಣ ಗುರುಗಳು ರಕ್ತಪಾತವಿಲ್ಲದೆ ಮಹತ್ವದ ಸಾಮಾಜಿಕ ಕ್ರಾಂತಿಯನ್ನು ನಡೆಸಿದರು. ದೇವಸ್ಥಾನ ಪ್ರವೇಶ, ಶಿಕ್ಷಣ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಅವರ ಚಿಂತನೆಗಳು ದಾರಿ ಮಾಡಿಕೊಟ್ಟವು ಎಂದರು.
ಕೊಡಗು ಜಿಲ್ಲೆಯಲ್ಲಿ ಎಸ್ಎನ್ಡಿಪಿ ವತಿಯಿಂದ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳು, ವೈದ್ಯರು, ಪಿಎಚ್ಡಿ ಪದವೀಧರರು, ಚಿನ್ನದ ಪದಕ ವಿಜೇತರು, ಮಾಧ್ಯಮ ಕ್ಷೇತ್ರದವರು, ಮಾಜಿ ಸೈನಿಕರು ಹಾಗೂ ಜನಪ್ರತಿನಿಧಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.
ಕೂರ್ಗ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಡಾ. ರಾಮಚಂದ್ರನ್ ಎಂ. ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಶ್ರೀ ನಾರಾಯಣ ಗುರುಗಳ ಐತಿಹಾಸಿಕ ಭೇಟಿಯ ಸಂದರ್ಭವನ್ನು ಸ್ಮರಿಸಿದರು. ಗುರುಗಳ ದಾರ್ಶನಿಕತೆ ಹಾಗೂ ಸಾಮಾಜಿಕ ಚಿಂತನೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಗಾಂಧೀಜಿ ಹಾಗೂ ನಾರಾಯಣ ಗುರುಗಳ ನಡುವೆ ಅನುವಾದಕರ ನೆರವಿನಿಂದ ನಡೆದ ಸಂವಾದವು ಭಾರತದ ವೈಚಾರಿಕ ಇತಿಹಾಸದಲ್ಲಿ ಪ್ರಮುಖ ಘಟ್ಟವಾಗಿದೆ. ಸುಮಾರು ೧೨೦ ವರ್ಷಗಳ ಹಿಂದೆ ಕೇರಳದಲ್ಲಿ ಜಾತೀಯ ತಾರತಮ್ಯ, ಅಸಮಾನತೆ ಹಾಗೂ ಮೂಲಭೂತ ಹಕ್ಕುಗಳ ನಿರಾಕರಣೆ ತೀವ್ರವಾಗಿತ್ತು. ಇಂತಹ ಸಾಮಾಜಿಕ ಪರಿಸ್ಥಿತಿಯ ನಡುವೆ ಶ್ರೀ ನಾರಾಯಣ ಗುರುಗಳು ಜ್ಞಾನದ ಬೆಳಕು ಚೆಲ್ಲಿ, ‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’ ಎಂಬ ಸಾರ್ವಕಾಲಿಕ ಸಂದೇಶವನ್ನು ಸಾರಿದರು ಎಂದರು. ಕಾರ್ಯದರ್ಶಿ ಕೆ.ವಿ. ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸುದೀರ್ಘ ಸೇವೆ ಸಲ್ಲಿಸಿದ ಎಂಟು ಮಾಜಿ ಯೋಧರನ್ನು, ಎಸ್ಎನ್ಡಿಪಿ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಾಲ್ವರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಿ ಗೌರವಿಸಲಾಯಿತು. ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಎನ್ಡಿಪಿ ಗುರು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಪಿ.ಆರ್. ಸುರೇಶ್, ಗೋಣಿಕೊಪ್ಪಲು ಎಸ್ಎನ್ಡಿಪಿ ಶಾಖೆ ಅಧ್ಯಕ್ಷ ಪಿ.ಜಿ. ರಾಜಶೇಖರ್, ಎಸ್ಎನ್ಡಿಪಿ ಗುರುಚೇತನ ಸಂಘದ ಗೌರವಾಧ್ಯಕ್ಷ ಶಾಜಿ ಅಚ್ಯುತನ್, ಕಾರ್ಯದರ್ಶಿ ಕೆ.ಬಿ. ಭಾಸ್ಕರ್, ಶಾಖೆಯ ಮಹಿಳಾ ಸಂಘಟನೆಯ ಅಧ್ಯಕ್ಷೆ ಅಶ್ವಧಿ ಚಂದ್ರನ್, ಮಾಜಿ ಸೈನಿಕರು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ರಜಿನಿ ಮದುರಾಜ್ ಪ್ರಾರ್ಥಿಸಿದರು. ಗೋಣಿಕೊಪ್ಪ ಮಹಿಳಾ ಶಾಖೆಯ ಸಹ ಕಾರ್ಯದರ್ಶಿ ಪ್ರಿಯ ಅರುಣ್ ಸ್ವಾಗತಿಸಿದರು. ಜ್ಯೋತಿ ಅರುಣ್ ಹಾಗೂ ಸುಬ್ರಮಣಿ ನಿರೂಪಿಸಿದರು. ಸಪ್ತಶ್ ರಾಮಕೃಷ್ಣನ್ ವಂದಿಸಿದರು.