ಸೋಮವಾರಪೇಟೆ, ಸೆ.೨೦: ಹಿಂದೂ ಮಲಯಾಳ ಸಮಾಜದ ವತಿಯಿಂದ ಪಟ್ಟಣದಲ್ಲಿ ಓಣಂ ಹಬ್ಬಾಚರಣೆ ಹಾಗೂ ಸಂಘದ ದಶಮಾನೋತ್ಸವ ಸಮಾರಂಭ ಸಂಭ್ರಮ-ಸಡಗರದಿAದ ನಡೆಯಿತು.
ಬೆಳಿಗ್ಗೆ ಪಟ್ಟಣದ ಶ್ರೀ ಮುತ್ತಪ್ಪ ದೇವಾಲಯದಿಂದ ಪ್ರಮುಖ ಮಾರ್ಗದಲ್ಲಿ ನಡೆದ ಓಣಾಘೋಷ ಮೆರವಣಿಗೆ ಆಕರ್ಷಣೀಯವಾಗಿತ್ತು. ಮಲಯಾಳ ಸಮುದಾಯದ ಮಹಿಳೆಯರು ಹಾಗೂ ಪುರುಷರು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕೇರಳದ ಚೆಂಡೆ ವಾದ್ಯ ಹಾಗೂ ಬಲಿ ಚಕ್ರವರ್ತಿ ವೇಷಧಾರಿಯಾಗಿದ್ದ ಮಾಲ್ದಾರೆಯ ಶಾಜಿ ಅವರು ಪ್ರಮುಖ ಆಕರ್ಷಣೆಯಾಗಿದ್ದರು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಇರುವ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ವಿವೇಕಾನಂದ, ಬಸವಣ್ಣ, ಕಾವೇರಿ, ಕುವೆಂಪು, ಕನ್ನಡಾಂಬೆ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಸಂಭ್ರಮದಿAದ ಸಾಗಿದ ಮೆರವಣಿಗೆ ಜಾನಕಿ ಸಭಾಂಗಣದಲ್ಲಿ ಸಮಾಪ್ತಿಯಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಅವರು ಉದ್ಘಾಟಿಸಿ ಮಾತನಾಡಿ, ಸಮಾನತೆಯ ಸಂಕೇತವಾಗಿ ಓಣಂ ಹಬ್ಬ ಆಚರಣೆ ನಡೆಯುತ್ತಿದೆ. ಹಬ್ಬಾಚರಣೆಗಳು ಸಾಮರಸ್ಯದ ಸಂಕೇತವಾಗಿದ್ದು, ಸಾಮೂಹಿಕ ಆಚರಣೆಗಳು ಸಂಭ್ರಮವನ್ನು ಹೆಚ್ಚಿಸುತ್ತವೆ ಎಂದರು.
ಹಿಂದೂ ಮಲಯಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ೨೦ ರಿಂದ ೨೫ ಲಕ್ಷ ಅನುದಾನ ಒದಗಿಸಲಾಗುವುದು. ಮಡಿಕೇರಿಯಲ್ಲೂ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದರು.
ಸಮುದಾಯದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕು ಎಂದ ಡಾ. ಮಂತರ್ ಗೌಡ ಅವರು, ಸಮುದಾಯದ ಅಭಿವೃದ್ಧಿಯೊಂದಿಗೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಗುರುವಾಯೂರು ಹಾಗೂ ಪರಶಿನಕಡವು ಕ್ಷೇತ್ರಕ್ಕೆ ಕೊಡಗಿನಿಂದ ಬಸ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆಸಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೇರಳ ಎರ್ನಾಕುಲಂ ಶಿವಗಿರಿನಂದ ಮಠದ ಶ್ರೀ ಶಿವಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ತಮ್ಮ ಮೂಲ ಸಂಸ್ಕೃತಿ ಆಚಾರ ವಿಚಾರಗಳನ್ನು ಮಲಯಾಳಿ ಸಮುದಾಯದವರು ಯಾವ ಪ್ರದೇಶದಲ್ಲಿದ್ದರೂ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಸೋಮವಾರಪೇಟೆ ಸಮಿತಿಯ ವತಿಯಿಂದ ಸಾಮೂಹಿಕವಾಗಿ ಓಣಂ ಆಚರಣೆ ಮಾಡುತ್ತಿರುವುದು ಸಮುದಾಯದ ಸಂಭ್ರಮವನ್ನು ಹೆಚ್ಚಿಸಿದೆ ಎಂದರು.
ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು. ಧಾರ್ಮಿಕತೆಯೊಂದಿಗೆ ಮಕ್ಕಳು ಬೆಳೆಯಬೇಕು. ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದರು.
ನಮ್ಮ ಸಮುದಾಯದ ಹೆಣ್ಣುಮಕ್ಕಳ ರಕ್ಷಣೆಯಾಗಬೇಕು. ವಿವಾಹ ಸಂದರ್ಭ ಮತಾಂತರ, ಧರ್ಮಾಂತರ ಆಗದಂತೆ ಜಾಗ್ರತೆ ವಹಿಸಬೇಕು. ನಾವು ಎಷ್ಟೇ ಅದ್ದೂರಿ ಸಭೆ ಸಮಾರಂಭ ನಡೆಸಿದರೂ ಸಂಸ್ಕೃತಿಯ ಕೊಂಡಿ ಕಳಚಿದರೆ ಸಮುದಾಯ ಅಳಿಯುತ್ತದೆ ಎಂದು ಸಮುದಾಯ ಬಾಂಧವರಿಗೆ ಎಚ್ಚರಿಕೆ ನೀಡಿದರು.
ಅಧ್ಯಕ್ಷತೆಯನ್ನು ಹಿಂದೂ ಮಲಯಾಳ ಸಮಾಜದ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ವಹಿಸಿದ್ದರು.
ವೇದಿಕೆಯಲ್ಲಿ ಕೇರಳ ಕಾಂಞAಗಾಡ್ನ ಗೃಹಸ್ಥಾಶ್ರಮ ಮಠಾಧೀಶರಾದ ಶ್ರೀ ಗಂಗಾಜೀ ನಾಯರ್ ಸ್ವಾಮೀಜಿ, ಮಾಜೀ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಹೈಕೋರ್ಟ್ನ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ,
ಚೌಡ್ಲು ವಿಎಸ್ಎಸ್ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಹಿಂದೂ ಮಲಯಾಳ ಸಮಾಜದ ಪ್ರಮುಖರಾದ ಪಿ.ಡಿ. ಪ್ರಕಾಶ್, ಎಂ.ಕೆ. ಮೋಹನ್, ಶೀಲಾ ಶಶಿ, ಕೆ. ಬಾಬು, ಸುಧೀರ್, ವಾಸುದೇವ್, ಡಾ. ಉದಯಕುಮಾರ್, ಕೆ.ಎಸ್. ಪದ್ಮನಾಭ, ವಿನೋದ್ ಕುಮಾರ್ ಎನ್.ಡಿ., ಓ.ಎಂ. ಸಂತೋಷ್, ಹರೀಂದ್ರನ್, ಕೆ.ಕೆ. ಬಾಲಕೃಷ್ಣ, ರಾಜೇಶ್ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿಂದೂ ಮಲಯಾಳ ಸಮಾಜದ ಮಹಿಳಾ ಘಟಕದಿಂದ ಸ್ವಾಗತ ನೃತ್ಯ, ವಿದ್ಯಾರ್ಥಿಗಳಿಂದ ಭಗವದ್ಗೀತಾ ಪಾರಾಯಣ ನಡೆಯಿತು. ನೀತು ರವೀಂದ್ರನ್ ಪ್ರಾರ್ಥಿಸಿದರು. ಅಜೀಶ್ ಕುಮಾರ್ ಸ್ವಾಗತಿಸಿ, ಶಶಿಧರನ್ ಕಾರ್ಯಕ್ರಮ ನಿರ್ವಹಿಸಿದರು.